ದೆಹಲಿ ಗ್ಯಾಂಗ್​ಸ್ಟರ್​ ಗೆಳತಿಗೆ ನೀಡಿದ್ದ ರೂ 100 ಕೋಟಿಯ ಬಂಗಲೆ ಪೊಲೀಸರಿಂದ ಸೀಲ್​: ಕಾಜಲ್​ ಝಾ ಯಾರು?

kajal
Published on

ನವದೆಹಲಿ: ಸ್ಕ್ರ್ಯಾಪ್ ಮೆಟಲ್ ಮಾಫಿಯಾ ಪಾತಕಿ ರವಿ ಕಾನಾ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆತನ ಗ್ಯಾಂಗ್‌ಗೆ ಸಂಬಂಧಿಸಿದ 200 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ನೋಯ್ಡಾ ಪೊಲೀಸರು ಸೀಲ್ ಮಾಡಿದ್ದಾರೆ.

ಸ್ಕ್ರ್ಯಾಪ್ ಮಾಫಿಯಾ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ನೋಯ್ಡಾ ಪೊಲೀಸರು ಈ ಪಾತಕಿ ತನ್ನ ಗೆಳತಿ ಕಾಜಲ್ ಝಾಗೆ ಉಡುಗೊರೆಯಾಗಿ ನೀಡಿದ್ದ 100 ಕೋಟಿ ರೂಪಾಯಿ ಮೌಲ್ಯದ ದಕ್ಷಿಣ ದೆಹಲಿಯ ಬಂಗಲೆ ಮೇಲೆ ದಾಳಿ ನಡೆಸಿ ಸೀಲ್ ಮಾಡಿದ್ದಾರೆ.

ಕಾಜಲ್ ಝಾ ಯಾರು?:

ರವಿ ಕಾನಾನ ಗೆಳತಿ ಕಾಜಲ್ ಝಾ ಕೆಲಸ ಹುಡುಕಿಕೊಂಡು ಈ ಗ್ಯಾಂಗ್​ ಸಂಪರ್ಕಿಸಿದ್ದರು, ಆದರೆ, ಶೀಘ್ರದಲ್ಲೇ ಅವರ ಗ್ಯಾಂಗ್‌ಗೆ ಸೇರಿಕೊಂಡಳು. ಅವನ ಎಲ್ಲಾ ಬೇನಾಮಿ ಆಸ್ತಿಗಳ ಪುಸ್ತಕಗಳನ್ನು ನಿರ್ವಹಿಸುವ ಉಸ್ತುವಾರಿಯಾದಳು.

ದಕ್ಷಿಣ ದೆಹಲಿಯ ಐಷಾರಾಮಿ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಅಂದಾಜು ರೂ. 100 ಕೋಟಿ ಮೌಲ್ಯದ ಮೂರು ಅಂತಸ್ತಿನ ಬಂಗಲೆಯನ್ನು ಕಾನಾ ಈಕೆಗೆ ಉಡುಗೊರೆಯಾಗಿ ನೀಡಿದ್ದಾನೆ. ಬುಧವಾರ ಪೊಲೀಸರು ಐಷಾರಾಮಿ ಆಸ್ತಿಯ ಮೇಲೆ ದಾಳಿ ನಡೆಸುವ ಮೊದಲು, ಕಾಜಲ್ ಝಾ ಮತ್ತು ಆಕೆಯ ಸಹಚರರು ಬಂಧನದಿಂದ ತಪ್ಪಿಸಿಕೊಳ್ಳಲು ಆವರಣದಿಂದ ಓಡಿಹೋದರು. ಬಳಿಕ ಪೊಲೀಸರು ಬಂಗಲೆಯನ್ನು ಸೀಲ್ ಮಾಡಿದ್ದರು.

ಪೊಲೀಸರ ಪ್ರಕಾರ, ರವಿ ಕಾನಾ ಎಂದು ಕರೆಯಲ್ಪಡುವ ರವೀಂದ್ರ ನಗರ ಎಂಬಾತ 16 ಸದಸ್ಯರ ಗ್ಯಾಂಗ್ ನಡೆಸುತ್ತಿದ್ದಾನೆ. ಅಕ್ರಮವಾಗಿ ರಿಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದಾನೆ. ಸ್ಕ್ರ್ಯಾಪ್ ಡೀಲರ್ ಆಗಿದ್ದ ಕಾನಾ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅಕ್ರಮವಾಗಿ ಸ್ಕ್ರ್ಯಾಪ್ ವಸ್ತುಗಳನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಗ್ಯಾಂಗ್ ರಚಿಸಿದ ನಂತರ ಈತ ಶತಕೋಟ್ಯಧೀಶನಾಗಿದ್ದಾನೆ ಎಂದು ವರದಿಯಾಗಿದೆ.

2014 ರಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದ ಕೊಲ್ಲಲ್ಪಟ್ಟ ಮತ್ತೊಬ್ಬ ಗ್ರೇಟರ್ ನೋಯ್ಡಾ ಗ್ಯಾಂಗ್‌ಸ್ಟರ್ ಹರೇಂದ್ರ ಪ್ರಧಾನ್​ನ ಸಹೋದರ ಈತ. ಹರೇಂದ್ರ ಮರಣದ ನಂತರ ರವಿ ಕಾನಾ ಅವರು ಗ್ಯಾಂಗ್​ ನೇತೃತ್ವ ವಹಿಸಿಕೊಂಡಿದ್ದಾನೆ. ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈತನಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿತ್ತು.

ಅಪಹರಣ ಮತ್ತು ಕಳ್ಳತನದ ಆರೋಪ ಸೇರಿದಂತೆ ರವಿ ಕಾನಾ ಮತ್ತು ಆತನ ಸಹಚರರ ವಿರುದ್ಧ ಇದುವರೆಗೆ 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗ್ರೇಟರ್ ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ತಿಳಿಸಿದ್ದಾರೆ. ಗ್ಯಾಂಗ್‌ನ ಆರು ಸದಸ್ಯರನ್ನು ಇದುವರೆಗೆ ಬಂಧಿಸಲಾಗಿದೆ.

ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವಾರು ಸ್ಕ್ರ್ಯಾಪ್ ಗೋದಾಮುಗಳನ್ನು ದಾಳಿ ಮಾಡಿ ಸೀಲ್ ಮಾಡಲಾಗಿದೆ. ಗ್ಯಾಂಗ್​ಸ್ಟರ್​ ಈಗ ತನ್ನ ಗೆಳತಿ ಮತ್ತು ಇತರ ಗ್ಯಾಂಗ್ ಸದಸ್ಯರೊಂದಿಗೆ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net