ಮಹಿಳಾ ಕಾನ್​ಸ್ಟೇಬಲ್​ ಕೆನ್ನೆಗೆ ಬಾರಿಸಿದ ಪೊಲೀಸ್ ವಾಹನ ಚಾಲಕ!

Police
Published on

ಭೋಜ್‌ಪುರ: ಪೊಲೀಸ್ ಠಾಣೆಯ ಚಾಲಕ ಮಹಿಳಾ ಕಾನ್​ಸ್ಟೇಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೊಯಿಲ್ವಾರ್ ಎಂಬಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವರದಿ ಕೇಳಿದ್ದಾರೆ ಎನ್ನಲಾಗಿದೆ.

ಕೊಯಿಲ್ವಾರ್ ಪೊಲೀಸ್ ಠಾಣೆಯ ಚಾಲಕ ಅತೀಶ್ ಕುಮಾರ್ ಎಂಬಾತ, ಇತರೆ ಪೊಲೀಸರ ಎದುರಲ್ಲೇ ಮಹಿಳಾ ಕಾನ್​ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿದೆ ಎನ್ನಲಾಗಿದೆ.

ಶಮೀಮ್ ಅಹಮದ್ ಎಂಬಾತ ತನ್ನ ಮನೆ ಮುಂದೆ ಅನಧಿಕೃತವಾಗಿ ಮನೆ ಕಟ್ಟಿದ್ದಾನೆ ಎಂದು ಆರೋಪಿಸಿ ಮೆರಾಜ್ ಎಂಬಾತ ಠಾಣೆ ಮೆಟ್ಟಿಲೇರಿದ್ದ. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 

ಈ ವೇಳೆ ಪೊಲೀಸ್ ವಾಹನದ ಚಾಲಕ ಅಲ್ಲಿದ್ದ ಜನರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದನ್ನು ಸ್ಥಳೀಯರು ವಿಡಿಯೋ ಮಾಡಲು ಆರಂಭಿಸಿದಾಗ ಮೊಬೈಲ್ ಕಿತ್ತುಕೊಂಡಿದ್ದಾನೆ. ಇದೇ ವೇಳೆ ಮಹಿಳಾ ಕಾನ್​ಸ್ಟೇಬಲ್ ಚಾಲಕನಲ್ಲಿ ಸುಮ್ಮನಿರುವಂತೆ ಕೇಳಿಕೊಳ್ಳಲು ಯತ್ನಿಸಿದಾಗ, ಎಲ್ಲರ ಮುಂದೆಯೇ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅಲ್ಲಿದ್ದ ಇತರೆ ಪೊಲೀಸರು ಚಾಲಕನನ್ನು ತಡೆದಿದ್ದಾರೆ ಎಂದು ವರದಿಯಾಗಿದೆ.

ಕೊಯಿಲ್ವಾರ್ ಠಾಣೆ ಅಧಿಕಾರಿ ಅವಿನಾಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೂರು ಸ್ವೀಕರಿಸಿದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜನರೊಂದಿಗೆ ಮಾತಿನ ಚಕಮಕಿ ನಡೆದಿದೆ. ಚಾಲಕನನ್ನು ಹಿಂದಿನಿಂದ ತಡೆಯುತ್ತಿರುವುದು ಮಹಿಳಾ ಕಾನ್‌ಸ್ಟೆಬಲ್ ಎಂಬುದು ಗೊತ್ತಾಗದೆ ಹಲ್ಲೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net