

ಉತ್ತರ ಪ್ರದೇಶ: NEET ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬದೌನ್ ಮೂಲದ ವಿಭು ಉಪಾಧ್ಯಾಯ, ಸಮಯ ಸಿಕ್ಕಾಗೆಲ್ಲ ಗಂಗಾರತಿ ಮಾಡುತ್ತಾನೆ ಎಂಬ ವಿಚಾರ ಎಲ್ಲರ ಗಮನೆ ಸೆಳೆಯುತ್ತಿದೆ. ಗಂಗಾ ನದಿ ತಟದಲ್ಲಿ ಸಂಜೆ ಹೊತ್ತಿನಲ್ಲಿ ಆರತಿ ಬೆಳಗುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಭು ಉಪಾಧ್ಯಾಯ, 2019ರಿಂದ ಸಮಯ ಸಿಕ್ಕಾಗೆಲ್ಲ ತೆರಳಿ ಗಂಗಾರತಿ ಮಾಡುತ್ತಾ ಬರುತ್ತಿದ್ದೇನೆ. ಇನ್ನು ಮುಂದೆಯೂ ಈ ಪುಣ್ಯಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಈ ಪುಣ್ಯ ಕಾರ್ಯದ ಫಲವೂ ಇದೆ ಎಂದು ನೆಟ್ಟಿಗರು ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ವೈದ್ಯನಾಗಬೇಕೆಂದು ಕನಸು ಕಂಡಿದ್ದೆ. ಹೀಗಾಗಿ 9ನೇ ತರಗತಿಯಿಂದಲೇ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಇದರಿಂದ ಸುಲಭವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಯಿತು ಎಂದು ವಿಭು ಉಪಾಧ್ಯಾಯ ಹೇಳಿಕೊಂಡಿದ್ದಾನೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಈ ಬಾರಿ NEET ಫಲಿತಾಂಶ 2023ರಲ್ಲಿ, ಇಬ್ಬರು ವಿದ್ಯಾರ್ಥಿಗಳಾದ ಪ್ರಬಂಜನ್ ಜೆ ಮತ್ತು ಬೋರಾ ವರುಣ್ ಚಕ್ರವರ್ತಿ 720 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)