VIDEO | ಬಾಲಕನನ್ನು ತಿಂದ ಮೊಸಳೆಯ ಜೀವ ತೆಗೆದ ಜನರು!

Crocodile
Published on

ಬಿಹಾರ: 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆಯನ್ನು, ನದಿ ದಡದಲ್ಲಿದ್ದ ಜನ ದೊಣ್ಣೆ, ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗೋಕುಲಪುರದ ನಿವಾಸಿ ಧರ್ಮೇಂದ್ರ ದಾಸ್ ಕುಟುಂಬ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಗಂಗಾ ನದಿಯ ದಡಕ್ಕೆ ಆಗಮಿಸಿದ್ದರು. ಬಾಲಕ ಅಂಕಿತ್ ನೀರು ತರಲೆಂದು ನದಿಗೆ ಇಳಿದಿದ್ದಾಗ, ಇದ್ದಕ್ಕಿದ್ದಂತೆ ಮೊಸಳೆಯೊಂದು ದಾಳಿ ಮಾಡಿದೆ. ಬಾಲಕನನ್ನು ನೀರಿನೊಳಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ.

ಬಾಲಕನ ಕಿರುಚಾಟ ಕೇಳಿ ಪಾಲಕರ ಭಯ ಬಿದ್ದಿದ್ದಾರೆ. ಕುಟುಂಬಸ್ಥರು ಅಂಕಿತ್​ನನ್ನು ರಕ್ಷಿಸಲು ಯತ್ನಿಸಿದರಾದರೂ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದ. ಸುದ್ದಿ ತಿಳಿದು ರೊಚ್ಚಿಗೆದ್ದ ಸ್ಥಳೀಯರು ನದಿಯ ಬಳಿ ಜಮಾಯಿಸಿ ಮೊಸಳೆಯನ್ನು ಬಲೆಗೆ ಬೀಳಿಸಿದ್ದಾರೆ. ಬಳಿಕ ದಡಕ್ಕೆ ಎಳೆದು ತಂದು ದೊಣ್ಣೆ ಮತ್ತು ರಾಡ್‌ನಿಂದ ಹೊಡೆದು ಸಾಯಿಸಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನದಿಯ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಮೊಸಳೆ ಘಾಟ್ ಬಳಿ ಬಂದಿದೆ. ಈ ಕುರಿತು ತನಿಖೆ ನಡೆಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಅಮಿತಾ ರಾಜ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net