

ಹಾಸನ: ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಮುಖ್ಯಪೇದೆಯೊಬ್ಬರು ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳ ಗಾಳಿಯನ್ನು ಸ್ವತಃ ತಹಸೀಲ್ದಾರ್ ಅವರೇ ತೆಗೆಸಿದ್ದಾರೆ. ತಹಸೀಲ್ದಾರ್ರ ಕ್ರಮ ಖಂಡಿಸಿ ರಸ್ತೆಯಲ್ಲೇ ಕುಳಿತು ಮುಖ್ಯಪೇದೆ ಪ್ರತಿಭಟನೆ ನಡೆಸಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ಸಂಭವಿಸಿದೆ.
ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಸಕಲೇಶಪುರ ಗ್ರಾಮಾಂತರ ಠಾಣೆಯ ಮುಖ್ಯಪೇದೆ ದಯಾನಂದ ಅಗತ್ಯ ಔಷಧ ಖರೀದಿಗಾಗಿ ಪಟ್ಟಣದ ಮೇಡಿಕಲ್ ಶಾಪ್ವೊಂದರ ಮುಂದೆ ತನ್ನ ಕಾರನ್ನು ನಿಲುಗಡೆ ಮಾಡಿ ತೆರಳಿದ್ದರು. ಆ ವೇಳೆಗೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಮಂಜುನಾಥ್, ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂಬ ಕಾರಣ ನೀಡಿ ಕಾರಿನ ನಾಲ್ಕು ಚಕ್ರಗಳ ಗಾಳಿ ತೆಗೆಸಿದರು. ಇದರಿಂದಾಗಿ ಮತ್ತಷ್ಟು ರಕ್ತದೊತ್ತಡಕ್ಕೆ ಒಳಗಾದ ದಯಾನಂದ ಸ್ಥಳದಲ್ಲೇ ಗಾಂಧೀಜಿ ಅವರ ಭಾವಚಿತ್ರ ಧರಣಿಗೆ ಕುಳಿತರು.
ಇದನ್ನೂ ಓದಿರಿ ಮಾಗಡಿ ಪುರಸಭೆಗೆ ವಾಮಾಚಾರ!
ತಹಸೀಲ್ದಾರ್ರ ನಡೆ ಪ್ರಶ್ನಿಸಿದ ಮುಖ್ಯಪೇದೆ ದಯಾನಂದ, ನ್ಯಾಯಕ್ಕಾಗಿ ಆಗ್ರಹಿಸಿ ಸುಮಾರು ಅರ್ಧಗಂಟೆ ಕಾಲ ಮುಖ್ಯರಸ್ತೆಯಲ್ಲೇ ಧರಣಿ ನಡೆಸಿದರು. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪಟ್ಟಣ ಠಾಣೆ ಪೊಲೀಸರು ಮುಖ್ಯಪೇದೆಯನ್ನು ಮನವೊಲಿಸುವ ಮೂಲಕ ಠಾಣೆಗೆ ಕರೆದೊಯ್ದ ಘಟನೆ ಮಂಗಳವಾರ ಸಂಭವಿಸಿದೆ. ಕಾನೂನು ಎಲ್ಲರಿಗೂ ಒಂದೇ ಎಂದು ತಹಸೀಲ್ದಾರ್ ತಿಳಿಹೇಳಿದ್ದಾರೆ.