ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ಅನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಚಾರ್ಜ್ಶೀಟ್ ಸಲ್ಲಿಕೆಯಾದ ಮೇಲೆ ಅನೇಕ ಸತ್ಯಗಳು, ಹುದುಗಿದ್ದ ಅನೇಕ ಕರಾಳ ಅಧ್ಯಾಯಗಳು ಹೊರ ಬಂದಿದೆ. ಇತ್ತ ರೇಣುಕಸ್ವಾಮಿ ಹತ್ಯೆ ಪ್ರಕರಣವನ್ನು ಬೇಗನೆ ಇತ್ಯರ್ಥಗೊಳಿಸಲು ಪೊಲೀಸರು ಚಿಂತನೆ ನಡೆಸಿದ್ದು, ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಥವಾ ಸ್ಪೆಷಲ್ ಕೋರ್ಟ್‌ಗೆ ಮನವಿ ಚಿಂತನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ದಯಾನಂದ್, ಪ್ರಕರಣವನ್ನು ಬೇಗನೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಥವಾ ಸ್ಪೆಷಲ್ ಕೋರ್ಟ್‌ಗೆ ಮನವಿ ಮಾಡಲು ಚಿಂತನೆ ನಡೆಸಿದ್ದೇವೆ. ಮುಂದೆ ಈ ಬಗ್ಗೆ ಮನವಿ ಮಾಡುವವರಿದ್ದೇವೆ.ಇನ್ನು ಚಾರ್ಜ್ಶೀಟ್ ವಿಚಾರವಾಗಿ ಮಾತನಾಡಿರುವ ಪೊಲೀಸ್ ಆಯುಕ್ತರು ಬಹುಪಾಲು ರಿಪೋರ್ಟ್ಗಳು ಚಾರ್ಜ್ಶೀಟ್ ಸಲ್ಲಿಕೆಗೂ ಮುನ್ನವೇ ನಮ್ಮ ಕೈಸೇರಿವೆ. ಮತ್ತಷ್ಟು ರಿಪೋರ್ಟ್ ಇನ್ನೂ ಬರಬೇಕಿದೆ.
ಇದನ್ನೂ ಓದಿ: ಆರ್ಸಿಬಿ ಇಲ್ಲದಿದ್ದರೆ ಏನಂತೆ, ನಾನು ಸಿಎಸ್ಕೆ ಪರ ಆಡುತ್ತೇನೆ; ಬೆಂಗಳೂರು ತಂಡದ ಸ್ಟಾರ್ ಆಟಗಾರನ ಹೇಳಿಕೆ ವೈರಲ್
ಇನ್ನು ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ಸಿಕ್ಕ ರಾಜಾತಿಥ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಬಿ. ದಯಾನಂದ್ ಅವರು ಈಗಾಗಲೇ ಪ್ರಕರಣವನ್ನು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಧ್ರುವ ಪ್ರಕರಣದ ಕುರಿತು ಹೇಳಿದ್ದಿಷ್ಟು
ಇನ್ನೂ ನಟ ಧ್ರುವ ಸರ್ಜಾ ಮ್ಯಾನೇಜರ್ ಬಂಧನ ಪ್ರಕರಣದ ಕುರಿತು ಮಾತನಾಡಿ, ಧ್ರುವ ಸರ್ಜಾಗೆ ಹತ್ತಿರವಾಗುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಹಾಗಾಗಿ ಸರ್ಜಾ ಮ್ಯಾನೇಜರ್ ಅಶ್ವಿನ್‌ನನ್ನ ಬಂಧಿಸಿದ್ದರು. ಬನಶಂಕರಿ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.