ಯುವರಾಜ್ ಸಿಂಗ್​ ವಿರುದ್ಧ ಪೊಲೀಸ್ ಕೇಸ್!

Yuvraj-Singh_web
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಲಾಕ್‌ಡೌನ್ ಸಮಯದಲ್ಲಿ ವೃತ್ತಿಜೀವನದ ಹಲವಾರು ಗಂಭೀರ ಮತ್ತು ತಮಾಷೆಯ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಅದರಿಂದಲೇ ಅವರು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ. ರೋಹಿತ್ ಶರ್ಮ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಸ್ಪಿನ್ನರ್ ಯಜುವೇಂದ್ರ ಚಾಹಲ್‌ರ ಕಾಲೆಳೆಯುವ ಸಲುವಾಗಿ ಯುವರಾಜ್ ತಮಾಷೆಯಿಂದ ಆಡಿದ ಮಾತಿನಿಂದಾಗಿ ಈಗ ಪೊಲೀಸ್ ಕೇಸ್ ಎದುರಿಸುವಂತಾಗಿದೆ.

ಯುವರಾಜ್ ಜಾತಿ ನಿಂದನೆಯ ಮಾತು ಆಡಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಅಭಿಮಾನಿಗಳು, ಯುವರಾಜ್ ಕ್ಷಮೆಯಾಚಿಸಬೇಕು ಎಂಬ ಅಭಿಯಾನ ಆರಂಭಿಸಿದ್ದರು. ಹರಿಯಾಣದ ಹಿಸಾರ್‌ನಲ್ಲಿ ದಲಿತರ ಹಕ್ಕುಗಳ ಹೋರಾಟಗಾರ ಮತ್ತು ವಕೀಲ ರಜತ್ ಕಲ್ಸನ್, ಯುವರಾಜ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಮಾಜಿ ಕ್ರಿಕೆಟಿಗನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚಾಹಲ್‌ರ ಟಿಕ್‌ಟಾಕ್ ವಿಡಿಯೋಗಳ ಬಗ್ಗೆ ತಮಾಷೆ ಮಾಡುವ ಭರದಲ್ಲಿ ಯುವರಾಜ್, ಚಾಹಲ್‌ರನ್ನು ಒಬ್ಬ ‘ಭಂಗಿ’ ಎಂದು ಕರೆದಿದ್ದಾರೆ. ಇದರ ಜತೆಜತೆಯಲ್ಲೇ ಯುವಿ-ರೋಹಿತ್ ಜೋರಾಗಿ ನಕ್ಕಿದ್ದಾರೆ. ಇದಕ್ಕಾಗಿ ಸಮುದಾಯವೊಂದರ ಜನರು, ಯುವರಾಜ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮಾತುಕತೆಯ ವೇಳೆ ಯುವರಾಜ್ ಹೇಳಿಕೆಯನ್ನು ಖಂಡಿಸದ ರೋಹಿತ್ ಶರ್ಮ ವಿರುದ್ಧವೂ ಕಲ್ಸನ್ ಸಿಟ್ಟಾಗಿದ್ದಾರೆ.

ಯುವಿ-ರೋಹಿತ್ ಮಾತುಕತೆ 2 ತಿಂಗಳ ಹಿಂದೆಯೇ ನಡೆದಿದ್ದರೂ, ಅದರ ಸಣ್ಣ ವಿಡಿಯೋ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅಭಿಮಾನಿಗಳು, ‘ಯುವರಾಜ್ ಸಿಂಗ್ ಮಾಫಿ ಮಾಂಗೋ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net