ಹೋಂ ಕ್ವಾರಂಟೈನಲ್ಲಿ ಇದ್ದುಕೊಂಡೇ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದ ಪೊಲೀಸ್​ ಕಮಿಷನರ್​

kamal pant
Published on

ಬೆಂಗಳೂರು: ಸ್ವತಃ ಹೋಂ ಕ್ವಾರಂಟೈನ್​ನಲ್ಲಿ ಇದ್ದುಕೊಂಡೇ ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಅವರು ಕರೊನಾ ಸೋಂಕಿತ ಪೊಲೀಸ್​ ಸಿಬ್ಬಂದಿಯ ಆರೋಗ್ಯವನ್ನು ವಿಡಿಯೋ ಕಾಲ್​ ಮೂಲಕ ವಿಚಾರಿಸಿದರು.

ಪೊಲೀಸ್​ ಆಯುಕ್ತರಾಗಿ ಕಮಲ್​ ಪಂತ್ ಶನಿವಾರ ಅಧಿಕಾರ ಸ್ವೀಕರಿಸಿದ್ದರು. ಸಿಎಂ ಬಿ.ಎಸ್​. ಯಡಿಯೂರಪ್ಪಗೆ ಭಾನುವಾರ ಕರೊನಾ ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಆಯುಕ್ತರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಈ ವೇಳೆ ಸೋಂಕು ತಗುಲಿ ಕೋವಿಡ್​ ಆಸ್ಪತ್ರೆ ಸೇರಿರುವ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್​ ಅವರೊಂದಿಗೆ ಪೊಲೀಸರ ಜತೆ ಸೋಮವಾರ ವಿಡಿಯೋ ಕಾಲ್​ನಲ್ಲಿ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.

ಈ ಮೊದಲು ರಾಜ್ಯ ಗುಪ್ತದಳ ಎಡಿಜಿಪಿ ಆಗಿದ್ದ ಕಮಲ್​ ಪಂತ್​, ಪ್ರತಿದಿನ ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ನೀಡುತ್ತಿದ್ದರು. ಕಮಿಷನರ್​ ಆದ ಮೇಲೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಸದ್ಯ ಕ್ವಾರಂಟೈನ್​ಗೆ ಒಳಪಟ್ಟಿದ್ದರೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net