ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

Sridhar Bhat Vinay Bhat
Published on

ಉತ್ತರಕನ್ನಡ: ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಎರಡು ದಿನಗಳ ಹಿಂದೆ ಒಂದೇ ಮನೆಯ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಅಪ್ಪ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಶಿವಮೊಗ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ.

ವಿನಯ್ ಭಟ್ ಹಾಗೂ ಈತನ ತಂದೆ ಶ್ರೀಧರ್ ಭಟ್ ಬಂಧಿತ ಆರೋಪಿಗಳು. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಫೆ. 24ರಂದು ಈ ಕೊಲೆಗಳು ನಡೆದಿದ್ದವು. ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾಲ್ವರನ್ನು ಅಟ್ಟಾಡಿಸಿ ಕತ್ತಿಯಿಂದ ಕಡಿದು ಹಾಕಲಾಗಿತ್ತು. ಬಳಿಕ ಆರೋಪಿಗಳು ಪರಾರಿಯಾಗಿ ತಲೆಮರೆಸಿಕೊಂಡಿದ್ದರು.

ಆಸ್ತಿ ವಿಚಾರವಾಗಿ ಈ ಕೊಲೆಗಳು ನಡೆದಿದ್ದವು. ಆರೋಪಿ ವಿನಯ್ ಸಹೋದರಿ ಶಂಭು ಭಟ್ ಅವರ ಹಿರಿಯ ಸೊಸೆ. ಈಕೆಯ ಪತಿಯ ಮರಣದ ಬಳಿಕ ಆಸ್ತಿಗಾಗಿ ಜಗಳಗಳಾಗಿದ್ದು, ಕೊನೆಗೆ ಆಕೆಯ ಪಾಲಿಗೆ ಒಂದಷ್ಟು ಆಸ್ತಿ ಹಂಚಿಕೆ ಮಾಡಲಾಗಿತ್ತು. ಅದಾಗ್ಯೂ ಅದನ್ನು ನೋಡಿಕೊಳ್ಳುತ್ತಿದ್ದ ವಿನಯ್ ಮತ್ತು ಶ್ರೀಧರ್ ಈ ಕೊಲೆಗಳನ್ನು ಮಾಡಿದ್ದು, ಪರಾರಿಯಾಗಿದ್ದರು. ಇಂದು ಸಿಕ್ಕಿ ಬಿದ್ದಿರುವ ಇವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net