

ಬೆಂಗಳೂರು: ಮಕ್ಕಳ ಎದುರೇ ಬಾಯ್ ಫ್ರೆಂಡ್ ಜೊತೆಗೆ ಸೇರಿಕೊಂಡು ಏಳೇಳು ಜನ್ಮ ಜೊತೆಗಿರುತ್ತೇನೆ ಎಂದು ಸಪ್ತಪದಿ ತುಳಿದಿದ್ದ ಗಂಡನನ್ನೇ ಕೊಂದಿದ್ದ ಕಿರಾತಕಿಯ ಅಸಲಿ ಮುಖ ಆರು ತಿಂಗಳ ಬಳಿಕ ಹೊರ ಬಂದಿದ್ದು ಈಗ ಆಕೆಯನ್ನು ಬಂಧಿಸಲಾಗಿದೆ.
ನಂದಿನಿ ಲೇಔಟ್ ಪೊಲೀಸರು ಅನಿತಾ ಹಾಗೂ ರಾಕೇಶ್ ಎಂಬುವರ ಬಂಧಿಸಿದ್ದಾರೆ. ಈ ಅನಿತಾ, ಆರು ತಿಂಗಳ ಹಿಂದೆ ತನ್ನ ಗಂಡನನ್ನ ಬಾಯ್ ಫ್ರೆಂಡ್ ರಾಕೇಶ್ ಜೊತೆ ಸೇರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಇದು ನಡೆದದ್ದು ಆಕೆಯ ಮಕ್ಕಳ ಎದುರೇ! ತಿಳಿದೋ, ತಿಳಿಯದೆಯೋ, ಆ ಮಕ್ಕಳು ಕೂಡ ಇಷ್ಟು ದಿನ ಸುಮ್ಮನಿದ್ದರು.
ಗಂಡ ಸತ್ತದ್ದನ್ನು ಮುಚ್ಚಿಹಾಕಲು ನಂತರ ಹಾರ್ಟ್ ಅಟ್ಯಾಕ್ ನಾಟಕ ಕೂಡ ಈ ಹಂತಕಿ ಮಾಡಿದ್ದಳು. ಇಲ್ಲಿಯ ತನಕ ಈಕೆಯ ಮಾತನ್ನು ಪೋಷಕರು ನಂಬಿದ್ದರು. ಆದರೆ ಇತ್ತೀಚಿಗೆ ಮಕ್ಕಳನ್ನು ಬಿಟ್ಟು ಪ್ರಿಯಕರ ರಾಕೇಶ್ ಜೊತೆಗೆ ಅನಿತಾ ಮೇಡಂ ಪರಾರಿಯಾಗಿದ್ದಾರೆ. ಸ್ವಾಭಾವಿಕವಾಗಿ ಆಕೆಯ ಮಕ್ಕಳು ಅವರ ಅಜ್ಜ-ಅಜ್ಜಿಯ ಸುಪರ್ದಿಗೆ ಬಂದಿದ್ದಾರೆ. ಈ ಸಂದರ್ಭ ಮಕ್ಕಳು ತಮ್ಮ ಅಜ್ಜಿ ಎದುರು ತಂದೆ ಸತ್ತದ್ದು ಹೇಗೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಕೊಲೆ ರಹಸ್ಯ ಕೇಳಿ ಶಾಕ್ ಆದ ಮೃತನ ತಾಯಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಲವ್ವಿ-ಡವ್ವಿ ಮಾಡುತ್ತಿದ್ದ ರಾಕೇಶ್ ಹಾಗೂ ಅನಿತಾ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.