ಪ್ಯಾರಿಸ್​​ ಒಲಿಂಪಿಕ್ಸ್: ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳೆ ನೀವು… ಮನು ಭಾಕರ್​ಗೆ ಪ್ರಧಾನಿ ಶ್ಲಾಘನೆ

ವಿಜಯವಾಣಿ - 2024-07-28T172454.226
Published on

ನವದೆಹಲಿ: ಈ ಬಾರಿ ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ ಪದಕದಾಟದಲ್ಲಿ ಹರಿಯಾಣದ ಮೂಲದ 22 ವರ್ಷದ ಶೂಟರ್​​ ಮನು ಭಾಕರ್​ ಅವರು ರೈಫಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ​ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕಗಳ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್​ ಶೂಟಿಂಗ್​ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಡುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.

ಶನಿವಾರ (ಜು.27) ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್​ 27 ಇನ್ನರ್​ ಸರ್ಕಲ್​ 10s ಒಳಗೊಂಡಂತೆ 580 ಅಂಕಗಳೊಂದಿಗೆ 3ನೇ ಸ್ಥಾನವನ್ನು ಪಡೆದು ಫೈನಲ್​ ಸುತ್ತಿಗೆ ಎಂಟ್ರಿ ಕೊಟ್ಟಿದ್ದರು. ಇಂದು ಮಧ್ಯಾಹ್ನ 3.30ಕ್ಕೆ ಚಟೌರೊಕ್ಸ್ ಶೂಟಿಂಗ್ ಸೆಂಟರ್​ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ 3ನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಗೆದ್ದು, ಇತಿಹಾಸ ಬರೆದಿದ್ದಾರೆ. ಪ್ರಸಕ್ತ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಭಾಜನರಾಗಿದ್ದಾರೆ.

ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮನು ಭಾಕರ್​ಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ. ಇದು ಐತಿಹಾಸಿಕ ಮೆಡಲ್. 2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಮಹಿಳೆ ನೀವಾಗಿದ್ದೀರಿ. ನಿಮಗೆ ಅಭಿನಂದನೆಗಳು. ಎಂತಹ ಅತ್ಯುತ್ತಮ ಸಾಧನೆ ಎಂದು ಅಭಿನಂದನೆ ಜತೆ ಶ್ಲಾಘನೆ ಕೂಡ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net