80% ಭ್ರಷ್ಟಾಚಾರ ಮಾಡುವ ಕಾಂಗ್ರೆಸ್​ನಿಂದ ಅಭಿವೃದ್ಧಿ ಸಾಧ್ಯವೇ? ಶಿವಮೊಗ್ಗದಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ

Narendra Modi Shivmogga
Published on

ಶಿವಮೊಗ್ಗ: ಕರ್ನಾಟಕದಲ್ಲಿ ಎಲ್ಲೇ ಹೋದರು ಜನರ ಬೆಂಬಲ ಸಿಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ರೋಡ್​ ಶೋನಲ್ಲಿ ಜನರು ಹೂಮಳೆಯನ್ನೇ ಸುರಿಸಿದ್ದಾರೆ. ಜನರ ಬೆಂಬಲ ನೋಡಿ ಸಂತೋಷವಾಗುತ್ತಿದೆ. ಕರ್ನಾಟಕದ ಜನತೆಗೆ ತಲೆ ಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್​ ನಾಯಕರು ಶ್ರೀಮಂತರಾಗಿದ್ದಾರೆ

ಶಿವಮೊಗ್ಗದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ, ಜನರ ಆಶೀರ್ವಾದ ನಮಗೆ ಸಿಕ್ಕಿದ್ದು, ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಕಾಂಗ್ರೆಸ್ ನಾಯಕರು ಕಂಗಾಲಾಗಿ ಹೋಗಿದ್ದು, ಸುಳ್ಳಿನ ಗ್ಯಾರೆಂಟಿ ಘೋಷಣೆ ಮಾಡಿದ್ದಾರೆ. ಬಲೂನ್​ನಂತೆ ಕಾಂಗ್ರೆಸ್ ಸುಳ್ಳಿನ ಗಾಳಿ ಬಿಡುತ್ತಿದೆ. ಕರ್ನಾಟಕದ ಅಭಿವೃದ್ಧಿಯನ್ನು ಕಾಂಗ್ರೆಸ್​ ಪಕ್ಷ ಎಂದೂ ಬಯಸುವುದಿಲ್ಲ. ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್​ ನಾಯಕರು ಶ್ರೀಮಂತರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ದಶಕಗಳ ಕಾಲ ಹಿಂದೆ ಕೊಂಡೊಯ್ದಿತ್ತು. 80% ಭ್ರಷ್ಟಾಚಾರ ಮಾಡುವ ಕಾಂಗ್ರೆಸ್ ನಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ? ಯುವಕರ ಭವಿಷ್ಯವನ್ನು ಕಾಂಗ್ರೆಸ್ ರೂಪಿಸಲು ಸಾಧ್ಯವೇ ಎಂಬುದನ್ನು ರಾಜ್ಯದ ಹೊಸ ಮತದಾರರಿಗೆ ಕೇಳಲು ಬಯಸುತ್ತೇನೆ. ದೇಶದ ಯುವಕರ ಬಗ್ಗೆ ಕಾಂಗ್ರೆಸ್ ಯಾವತ್ತು ಯೋಚಿಸಿಲ್ಲ ಎಂದು ಹೇಳಿದರು.

ರೈತರಿಗೆ ಪ್ರೋತ್ಸಾಹ

ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಶಿವಮೊಗ್ಗ ಜಿಲ್ಲೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಶಿವಮೊಗ್ಗ ಕ್ಷೇತ್ರ ಕೃಷಿಯ ಹಬ್ ಆಗಿದೆ ಎಂದರು. ಇದೇ ವೇಳೆ ಅಡಿಕೆ ಬೆಳೆಯ ಬಗ್ಗೆ ಪ್ರಸ್ತಾಪಿಸಿ, ಅಡಿಕೆ ಕೃಷಿಕರಿಗೆ ಹೆಚ್ಚಿನ ಬೆಂಬಲ ನೀಡಿದ್ದೇವೆ. ಮೊದಲು ಒಂದು ಕೆ.ಜಿ. ಅಡಿಕೆಯ ಆಮದು ಬೆಲೆ 100 ರೂ. ಇತಯ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 350 ರೂ. ಆಮದು ಬೆಲೆ ಆಗಿದೆ ಎಂದು ಹೇಳಿದರು.

ನಾನು ಗುಜರಾತ್ ಸಿಎಂ ಆಗಿದ್ದಾಗ ಯಡಿಯೂರಪ್ಪ ಕರ್ನಾಟಕದ ಸಿಎಂ ಆಗಿದ್ದರು. ಈ ವೇಳೆ ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಯಡಿಯೂರಪ್ಪನವರು ದೆಹಲಿಗೆ ನಿಯೋಗ ತೆಗೆದುಕೊಂಡು ಬಂದಿದ್ದರು. ಶಿವಮೊಗ್ಗದ ರೈತರ ಕಲ್ಯಾಣಕ್ಕಾಗಿ ಯಡಿಯೂರಪ್ಪ ಶ್ರಮಿಸಿದ್ದಾರೆ. ಯಾವುದೇ ಕಾರಣಕ್ಕೂ ಅಡಕೆ ಬೆಳಗಾರರು ಆಂತಕಕ್ಕೆ ಒಳಗಾಗಬೇಡಿ. ಹಲವು ಯೋಜನೆಗಳ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದೇವೆ ಎಂದು ಭರವಸೆ ನೀಡಿದರು.

ಯುವಕರಿಗೆ ಉದ್ಯೋಗ ಸೃಷ್ಟಿ

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯದಲ್ಲಿ ಹೊಸ ಹೊಸ ಕಾಲೇಜುಗಳ ನಿರ್ಮಾಣವಾಗಿವೆ. ಯುವ ಜನತೆಯನ್ನು ಕಾಂಗ್ರೆಸ್ ವಂಚಿಸಿದರೆ, ಬಿಜೆಪಿ 13 ಲಕ್ಷಕ್ಕೂ ಹೊಸ ಉದ್ಯೂಗಳನ್ನು ಸೃಷ್ಟಿಸಿದೆ. ಪ್ರತಿ ಎರಡು ದಿನಗಳಿಗೆ ಒಂದೊಂದು ಕಾಲೇಜಿ ನಿರ್ಮಾಣವಾಗುತ್ತಿದ್ದರೆ, ಎರಡು ವಾರಗಳಿಗೆ ಒಂದರಂತೆ ವಿಶ್ವ ವಿದ್ಯಾನಿಲಯಗಳು ತಲೆ ಎತ್ತಿವೆ. ಆಟೋ ಮೊಬೈಲ್ ಫ್ಯಾಕ್ಟರ್ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net