

ನವದೆಹಲಿ: ಕರೊನಾ ಆತಂಕದ ಮಧ್ಯೆ ದೇಶಕ್ಕೆ ಎದುರಾಗಿರುವ ಇನ್ನೊಂದು ಆತಂಕವೆಂದರೆ ಆಂಫನ್ ಚಂಡಮಾರುತ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತ ಸೂಪರ್ ಸೈಕ್ಲೋನ್ ಆಗಿ ಬದಲಾಗಿದ್ದು, ವೇಗದ ತೀವ್ರತೆಯನ್ನೂ ಹೆಚ್ಚಿಸಿಕೊಂಡಿದೆ.
ಚಂಡಮಾರುತ ಈಶಾನ್ಯ ಬಂಗಾಳ ಕೊಲ್ಲಿ ಮೂಲಕ ಪಶ್ಚಿಮ ಬಂಗಾಳ ಪ್ರವೇಶಿಸಿ, ಮೇ 20 ಹೊತ್ತಿಗೆ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಾದ ದಿಘಾ ಮತ್ತು ಹತಿಯಾ ದ್ವೀಪಗಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆಂಫನ್ ಗಂಭೀರತೆ ಹೆಚ್ಚುತ್ತಿರುವ ಮಧ್ಯೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಂಡಮಾರುತದ ಸ್ವರೂಪ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ಸ್ಥಳದಲ್ಲಿರುವ ವಾತಾವರಣದ ಬಗ್ಗೆ ಮೋದಿಯವರು ಎನ್ಡಿಆರ್ಎಫ್ನಿಂದ ವಿವರಣೆ ಕೇಳಿದ್ದಾರೆ.
ಚಂಡಮಾರುತದ ಪ್ರಭಾವ ಇರುವ ಕರಾವಳಿ ಪ್ರದೇಶಗಳಲ್ಲಿ ಎನ್ಡಿಆರ್ಎಫ್ನ 25 ತಂಡವನ್ನು ನಿಯೋಜಿಸಲಾಗಿದೆ. ಅದರೊಟ್ಟಿಗೆ ಇನ್ನೂ 12 ತಂಡಗಳು ಅಗತ್ಯ ಬಿದ್ದರೆ ಹೊರಡಲು ಸಿದ್ಧವಾಗಿವೆ. ಇನ್ನೂ 24 ತಂಡಗಳನ್ನು, ಚಂಡಮಾರುತ ಅಪ್ಪಳಿಸಬಹುದಾದ ಬೇರೆಬೇರೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ನ ಡಿಜಿ ಸಭೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತಿತರರು ಇದ್ದರು.
ಆಂಫನ್ ಚಂಡ ಮಾರುತ ಬುಧವಾರ (ಮೇ 20)ದಂದು ಪಶ್ಚಿಮ ಬಂಗಾಳದ ಕೋಲ್ಕತ್ತದ ಕರಾವಳಿ ತೀರಗಳಲ್ಲಿ ಭೂಕುಸಿತದಂತಹ ಅವಘಡ ಸೃಷ್ಟಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್ )