ಕೆಂಪು ಡೈರಿ ಹೊರಬಂದರೆ ಕಾಂಗ್ರೆಸ್​ ಸರ್ಕಾರದ ಕರ್ಮಕಾಂಡ ಬಯಲು; ಪ್ರಧಾನಿ ಮೋದಿ ವಾಗ್ದಾಳಿ

Narendra Modi
Published on

ಜೈಪುರ: ಅಶೋಕ್​ ಗೆಹ್ಲೋಟ್​ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರವು ಪೇಪರ್​ ಲೀಕ್​ ಮಾಫಿಯಾದ ಮೂಲಕ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ಧಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ತವರು ಜಿಲ್ಲೆ ಜೋಧ್​ಪುರದಲ್ಲಿ ಐದು ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಂಪು ಡೈರಿಯ ವಿಚಾರವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ಹಿಂದೆ ಅಶೋಕ್​ ಗೆಹ್ಲೋಟ್​ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ತಾವು ಸಂಪುಟದಿಂದ ವಜಾಗೊಂಡ ಬಳಿಕ ಕೆಂಪು ಡೈರಿಯ ಬಗ್ಗೆ ಉಲ್ಲೇಖಿಸಿ ಮಾಧ್ಯಮಗಳ ಮುಂದೆ ಹೇಳಿದ್ದರು. ಕಾಂಗ್ರೆಸ್​ ಸರ್ಕಾರ ಮಾಡಿರುವ ಪ್ರತಿಯೊಂದು ಭ್ರಷ್ಟಾಚಾರ ಪ್ರಕರಣದ ಕರಾಳ ಕೃತ್ಯಗಳು ಆ ಡೈರಿಯಲ್ಲಿ ದಾಖಲಾಗಿವೆ. ಒಂದು ವೇಳೆ ಅದರು ಹೊರಬಂದರೆ ಕಾಂಗ್ರೆಸ್​ ಸರ್ಕಾರದ ಕರ್ಮಕಾಂಡ ಬಯಲಾಗುತ್ತದೆ. ಅದನ್ನು ಬಯಲಿಗೆಳೆಯಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ ಎಂದಿದ್ದಾರೆ.

ಕಾಂಗ್ರೆಸ್​ ಎಂದಿಗೂ ರೈತರು ಹಾಗೂ ಯೋಧರ ಬಗ್ಗೆ ಯೋಚನೆ ಮಾಡಿಲ್ಲ. ಕುರ್ಚಿಗಿಂತ ಅವರಿಗೆ ಮುಖ್ಯವಾದದ್ದು ಬೇರೇನೂ ಇಲ್ಲ. ವೋಟ್​ಬ್ಯಾಂಕ್​ ರಾಜಕ್ಕಾರಣಕ್ಕಾಗಿ ಜನರ ಹಿತಾಸಕ್ತಿಯನ್ನು ನಿರಾಕರಿಸಿ ಏನೂ ಬೇಕಾದರೂ ಮಾಡಲು ಸಿದ್ದವಾಗಿರುತ್ತದೆ. ಬಿಜೆಪಿ ಅಧಿಕಾರಕ್ಕೇರಿದ್ದಲ್ಲಿ ರಾಜ್ಯವನ್ನು ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಸ್ಥಾನವನ್ನು ನಂಬರ್​ ಒನ್​ ಮಾಡಲಿದ್ಧೇವೆ. ಬಿಜೆಪಿ ಸರ್ಕಾರ ರಚನೆಯ ನಂತರ ರಾಜ್ಯದ ಪ್ರತಿ ಮೂಲೆಮೂಲೆಗೂ ಅಭಿವೃದ್ಧಿಯನ್ನು ಕೊಂಡೊಯ್ಯಲಿದೆ ಎಂದು ವಾಗ್ದಾನ ಮಾಡಿದ್ದಾರೆ.

ಇದಲ್ಲದೆ, ನಮ್ಮ ವಿಜ್ಞಾನಿಗಳ ಉತ್ತಮ ಕೆಲಸವನ್ನು ಪ್ರದರ್ಶಿಸಿದ್ದಕ್ಕಾಗಿ” ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ತಯಾರಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ನಮ್ಮ ವಿಜ್ಞಾನಿಗಳು ಕೋವಿಡ್ -19 ಲಸಿಕೆ ತಯಾರಿಸಲು ಹಗಲು ರಾತ್ರಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಚಲನಚಿತ್ರ ತೋರಿಸುತ್ತದೆ. ಚಲನಚಿತ್ರಗಳನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ, ಎಂದು ಪ್ರಧಾನಿ ಮೋದಿ ಜೋಧ್​ಪುರದಲ್ಲಿ ಹೇಳಿದ್ದಾರೆ.

ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಚುನಾವಣಾ ಆಯೋಗ ಶೀಘ್ರದಲ್ಲೇ ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net