

ನವದೆಹಲಿ : ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಭಾರತದ ಪುರುಷರ ಹಾಕಿ ತಂಡ, ಸೆಮಿಫೈನಲ್ಸ್ನಲ್ಲಿ 2-5 ಸ್ಕೋರ್ನೊಂದಿಗೆ ವರ್ಲ್ಡ್ ನಂ.2 ಆಗಿರುವ ಬೆಲ್ಜಿಯಂ ತಂಡದ ವಿರುದ್ಧ ಸೋತಿದೆ. ಹಾಕಿಯಲ್ಲಿ ಚಿನ್ನದ ಪದಕದತ್ತಲೇ ನಿರೀಕ್ಷೆ ಇರಿಸಿದ್ದ ಕ್ರೀಡಾಪ್ರೇಮಿಗಳಿಗೆ ಇದು ಭಾರೀ ನಿರಾಶೆ ತಂದಿದೆ.
ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಗೆಲುವುಗಳು ಮತ್ತು ಸೋಲುಗಳು ಜೀವನದ ಭಾಗವಾಗಿದೆ" ಎಂದು ಸಾಂತ್ವನ ಹೇಳಿದ್ದಾರೆ. ಜೊತೆಗೆ, "ನಮ್ಮ ಪುರುಷರ ಹಾಕಿ ತಂಡ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ. ಇದೇ ಮುಖ್ಯವಾಗಿ ಗಣನೆಗೆ ಬರುವುದು" ಎಂದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾರತ ತಂಡ ಇನ್ನೂ ಕಂಚಿನ ಪದಕಕ್ಕಾಗಿ ಸೆಣಸಲಿರುವ ಹಿನ್ನೆಲೆಯಲ್ಲಿ, ಮುಂದಿನ ಪಂದ್ಯಕ್ಕೆ ತಂಡಕ್ಕೆ ಶುಭ ಕೋರಿರುವ ಪ್ರಧಾನಿ ಮೋದಿ, "ಭಾರತ ನಮ್ಮ ಆಟಗಾರರ ಬಗ್ಗೆ ಹೆಮ್ಮೆ ಹೊಂದಿದೆ" ಎಂದಿದ್ದಾರೆ.