More

    ರಾಜ್ಯಕ್ಕೆ ಬರಲಿದ್ದಾನೆ ಪಿಎಂ ಮಿತ್ರ: ಪ್ರಧಾನಿ ಮೋದಿ ಘೋಷಣೆ; ಕಲಬುರಗಿಯಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆ

    ಬೆಂಗಳೂರು: ಡಬಲ್ ಇಂಜಿನ್ ಸರ್ಕಾರದ ಲಾಭವನ್ನು ರಾಜ್ಯದ ಜನರಿಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಘೋಷಿಸಿದೆ. ಜವಳಿ ಕ್ಷೇತ್ರದ ಬೆಳವಣಿಗೆ ಇರುವ ಅವಕಾಶ ಬಳಸಿಕೊಳ್ಳುವ ಉದ್ದೇಶದಿಂದ ದೇಶ ಏಳು ಕಡೆಗಳಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್​ಟೈಲ್ ರೀಜನ್ ಆಂಡ್ ಅಪೇರಲ್ (ಪಿಎಂ ಮಿತ್ರ) ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಯೋಜನೆಯನ್ನು ಅನುಷ್ಠಾನ ಮಾಡಲಿದೆ. ಕರ್ನಾಟಕದೊಂದಿಗೆ ತಮಿಳುನಾಡು, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರವನ್ನು ಈ ಯೋಜನೆಗೆ ಗುರುತಿಸಲಾಗಿದೆ.

    ಕಲಬುರಗಿಯಲ್ಲಿ ಈ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಪ್ರಧಾನಿಯವರ ‘5ಎಫ್’ ಕಲ್ಪನೆಯಲ್ಲಿ ಇವು ಅನುಷ್ಠಾನಗೊಳ್ಳುತ್ತಿದೆ (ಫಾಮ್ರ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್) ಅಂದರೆ, ಕೃಷಿ ಭೂಮಿಯಿಂದ ನೂಲಿಗೆ ರೂಪಾಂತರ, ಬಳಿಕ ಕಾರ್ಖಾನೆಯಲ್ಲಿ ಉಡುಪು ತಯಾರಾಗಿ ಫ್ಯಾಷನ್ ಮೂಲಕ ಜನಮನ್ನಣೆಗೆ ಪಾತ್ರವಾಗಿ ವಿದೇಶಕ್ಕೂ ರಫ್ತಾಗಬೇಕೆಂಬ ದೂರದೃಷ್ಟಿ ಈ ಯೋಜನೆಯದ್ದು. ಈ ಮೂಲಕ ಜವಳಿ ಉತ್ಪಾದನೆ ಹಾಗೂ ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಸಾಕಾರಗೊಳಿಸುವಲ್ಲಿ ಈ ಪಾರ್ಕ್​ಗಳು ಪ್ರಮುಖ ಹೆಜ್ಜೆಯಾಗಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

    ಈ ಪಾರ್ಕ್​ಗಳು ಜವಳಿ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯನ್ನು ಸಾಧಿಸಲು ಕೂಡ ಸಹಾಯಕವಾಗಲಿವೆ. ಅಲ್ಲದೆ, ಭಾರತದಲ್ಲಿ ಉತ್ಪಾದನೆಗೆ ಜಾಗತಿಕ ಉತ್ಪಾದಕರನ್ನೂ ಸಹ ಆಕರ್ಷಿಸಬಹುದು.

    ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    ಈ ಯೋಜನೆ ಬಳಸಿಕೊಳ್ಳಲು 13 ರಾಜ್ಯಗಳಿಂದ 18 ಪ್ರಸ್ತಾವನೆಗಳು ಕೇಂದ್ರಕ್ಕೆ ಸಲ್ಲಿಕೆಯಾಗಿದ್ದವು. ಈ ಪೈಕಿ 7 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಸಾರಿಗೆ ಸಂಪರ್ಕ, ಜವಳಿ ಉದ್ಯಮಕ್ಕೆ ಪ್ರಸ್ತುತ ಅಲ್ಲಿರುವ ಪೂರಕ ಪರಿಸರ, ಜವಳಿ/ಉದ್ಯಮ ನೀತಿ, ಮೂಲಸೌಕರ್ಯ, ಅತ್ಯಗತ್ಯ ಉಪಯುಕ್ತ ಸೇವೆಗಳು ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಬಹುಮಾದರಿ ಸಂಪರ್ಕ ಜಾಲವೂ ಆದ್ಯತೆ ಪಡೆದಿದೆ.

    ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಜವಳಿ ವಲಯವನ್ನು ಉತ್ತೇಜಿಸುತ್ತದೆ. ಹೂಡಿಕೆ ಆಕರ್ಷಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತವೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ಗೆ ಉತ್ತಮ ಉದಾಹರಣೆ.

    | ನರೇಂದ್ರ ಮೋದಿ ಪ್ರಧಾನಿ

    ಕರ್ನಾಟಕಕ್ಕೆ ಬರಲಿರುವ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಜವಳಿ ವಲಯವನ್ನು ಉತ್ತೇಜಿಸುವುದರ ಜತೆಗೆ, ಇದು ಸ್ಥಳೀಯ ಪೂರಕ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ. ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳು.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    • ದೇಶದ ಏಳು ಕಡೆಗಳಲ್ಲಿ ಸ್ಥಾಪನೆ
    • 70 ಸಾವಿರ ಕೋಟಿ ಬಂಡವಾಳ
    • 20 ಲಕ್ಷ ಉದ್ಯೋಗಾವಕಾಶ
    • ವಿಶ್ವದರ್ಜೆಯ ಮೂಲ ಸೌಕರ್ಯ
    • ಐದು ವರ್ಷ ಕಡಿಮೆ ದರದಲ್ಲಿ ವಿದ್ಯುತ್
    • ಕೇಂದ್ರದಿಂದ 500 ಕೋಟಿ ರೂ.
    • ಘಟಕಗಳಿಗೆ 300 ಕೋಟಿ ರೂ. ಇನ್ಸೆಂಟೀವ್

    ಯೋಜನೆಯಲ್ಲಿ ಏನಿರಲಿದೆ?: ಈ ಪಾರ್ಕ್​ಗಳು ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಹೊಂದಿರುತ್ತವೆ ಮತ್ತು ವಿದೇಶಿ ನೇರ ಹೂಡಿಕೆ ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವಂತೆಯೇ ರೂಪುಗೊಳ್ಳುತ್ತವೆ. ಈ ವಲಯ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯನ್ನು ಕೂಡ ಉತ್ತೇಜಿಸುವಂತಿರಲಿದೆ. ಮೆಗಾ ಜವಳಿ ಪಾರ್ಕ್ ಅತ್ಯುತ್ತಮ ಮೂಲಸೌಕರ್ಯ, ಪ್ಲಗ್ ಅಂಡ್ ಪ್ಲೇ ಸೌಲಭ್ಯ ಮತ್ತು ಉದ್ಯಮಕ್ಕೆ ಪೂರಕ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ನೀಡುತ್ತವೆ. ಈ ಮೂಲಕ ಒಂದು ಅನನ್ಯ ಮಾದರಿಯನ್ನು ಕಟ್ಟಿಕೊಡಲಿದೆ.

    ಕೇಂದ್ರದ ಉಸ್ತುವಾರಿ: ಜವಳಿ ಸಚಿವಾಲಯ ಈ ಯೋಜನೆಯ ಕಾರ್ಯಗತಗೊಳಿಸುವ ಮೇಲ್ವಿಚಾರಣೆ ಮಾಡಲಿದೆ. ಪ್ರತಿ ಜವಳಿ ಪಾರ್ಕ್​ಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ವಾಹಕವನ್ನು (ಎಸ್​ಪಿವಿ) ರಚಿಸಲಾಗುವುದು. ಅದು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ.

    ಪ್ರತಿ ಜವಳಿ ಪಾರ್ಕ್ ಅಭಿವೃದ್ಧಿಪಡಿಸಲು 500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ. ಅಲ್ಲದೆ ಪಾರ್ಕ್​ನಲ್ಲಿ ಹೂಡಿಕೆ ಮಾಡುವ ಪ್ರತಿ ಘಟಕಗಳಿಗೆ ಪ್ರೋತ್ಸಾಹ ನೀಡಲು 300 ಕೋಟಿ ರೂ. ಒದಗಿಸಲಿದೆ. ಶೀಘ್ರವಾಗಿ ಘಟಕ ಅನುಷ್ಠಾನಕ್ಕೆ ಪ್ರೋತ್ಸಾಹಕಗಳನ್ನೂ ನೀಡಲಾಗುತ್ತದೆ. ಇತರೆ ಸರ್ಕಾರಿ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶ ಇರಲಿದೆ.

    ರಾಜ್ಯ ಸರ್ಕಾರದ ಜವಾಬ್ದಾರಿ: ರಾಜ್ಯ ಸರ್ಕಾರಗಳು ಈ ಪಾರ್ಕ್ ಸ್ಥಾಪನೆಗೆ ಒಂದು ಸಾವಿರ ಎಕರೆ ಭೂಮಿಯನ್ನು ನೀಡಬೇಕಾಗುತ್ತದೆ. ಜತೆಗೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ, ನೀರಿನ ಲಭ್ಯತೆ ಮತ್ತು ತ್ಯಾಜ್ಯ ನೀರು ವಿಲೇವಾರಿ ವ್ಯವಸ್ಥೆ, ಪರಿಣಾಮಕಾರಿ ಏಕ ಗವಾಕ್ಷಿ ಅನುಮತಿ ಸೇವೆ ಮತ್ತು ಅನುಕೂಲಕರವಾದ ಕೈಗಾರಿಕಾ, ಜವಳಿ ನೀತಿ ರೂಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.

    20 ಲಕ್ಷ ಉದ್ಯೋಗಾವಕಾಶಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೂಡಿಕೆಯನ್ನು ಹೆಚ್ಚಿಸಲು, ನಾವೀನ್ಯತೆಯನ್ನು ಉತ್ತೇಜಿಸಲು, ಉದ್ಯೋಗಾವಕಾಶ ಸೃಷ್ಟಿಸಲು ಮತ್ತು ಅಂತಿಮವಾಗಿ ಭಾರತವನ್ನು ಜವಳಿ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡಲು ಒಟ್ಟೊಟ್ಟಿಗೆ ಕೆಲಸ ಮಾಡುತ್ತವೆ. ಈ ಪಾರ್ಕ್​ಗಳ ಮೂಲಕ 70,000 ಕೋಟಿ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ.

    ಖರ್ಗೆ ಕ್ಷೇತ್ರದ ಮೇಲೆ ಕಣ್ಣು: ಮಲ್ಲಿಕಾರ್ಜುನ ಖರ್ಗೆ ದೀರ್ಘ ಕಾಲದಿಂದ ಪ್ರತಿನಿಧಿಸುತ್ತಿರುವ, ಹೆಚ್ಚಿನ ಪ್ರಭಾವ ಹೊಂದಿರುವ ಕಲಬುರಗಿ ಕ್ಷೇತ್ರದಲ್ಲಿ ಈ ಘಟಕ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಂದು ಸಾವಿರ ಎಕರೆ ಜಾಗವನ್ನೂ ಗುರುತಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಜವಳಿ ಪಾರ್ಕ್ ಕಾರ್ಯಾರಂಭ ಮಾಡಬೇಕೆಂಬ ಗುರಿಯನ್ನೂ ಹಾಕಿಕೊಳ್ಳಲಾಗಿದೆ.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts