

ಬೆಂಗಳೂರು: ಮನೆಗೆ ಅಥವಾ ಅಂಗಡಿ-ಕಚೇರಿಗಳಿಗೆ ಕಳ್ಳರು ಬಂದರೆ ಅವರನ್ನು ಹೆದರಿಸಿ ಓಡಿಸಲು ಸಾಮಾನ್ಯವಾಗಿ ಸೈರನ್ ಮೊರೆ ಹೋಗುವ ಜನರು ಇನ್ನು ಮುಂದೆ ಕಳ್ಳರಿಗೆ ಹೊಗೆ ಹಾಕಿಸಬಹುದು. ಅರ್ಥಾತ್, ಕಳವಿಗೆಂದು ನುಗ್ಗಿದವರನ್ನು ಸೈರನ್ ಬದಲಿಗೆ ಧೂಮದಿಂದಲೇ ಹೆದರಿಸಿ ಓಡಿಸಬಹುದು.
ಮಹಿಳೆಯರು ತಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಸುತ್ತಿದ್ದ ರೀತಿಯಲ್ಲೇ ಜನರು ಕಳ್ಳರಿಂದ ಮನೆ-ಅಂಗಡಿ-ಕಚೇರಿಗಳಲ್ಲಿ ರಕ್ಷಣೆ ಪಡೆಯಲು ಈ ಸ್ಮಾರ್ಟ್ಫಾಗ್ ಯಂತ್ರದ ನೆರವು ಪಡೆಯಬಹುದು. ಪ್ರತಿಷ್ಠಿತ ಗೃಹೋಪಕರಣಗಳ ತಯಾರಿಕಾ ಸಂಸ್ಥೆ ಈ ಯಂತ್ರವನ್ನು ರೂಪಿಸಿದೆ. ಕಳ್ಳರ ಅಥವಾ ಅತಿಕ್ರಮ ಪ್ರವೇಶವಾದಾಗ ಈ ಯಂತ್ರ ದಟ್ಟಹೊಗೆಯನ್ನು ಹೊರಸೂಸಿ ಅವರನ್ನು ತಬ್ಬಿಬ್ಬಾಗಿಸಿಬಿಡುತ್ತದೆ.
ಮೋಷನ್ ಸೆನ್ಸರ್ ಆಧಾರಿತ ಭದ್ರತಾ ವ್ಯವಸ್ಥೆ ಇದಾಗಿದ್ದು, ಅತಿಕ್ರಮ ಪ್ರವೇಶವನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ, ದಟ್ಟವಾದ ಹೊಗೆಯನ್ನು ಹೊರ ಸೂಸುತ್ತದೆ. ಬರೀ ಅರ್ಧ ನಿಮಿಷದಲ್ಲೇ ಸುಮಾರು 21 ಸಾವಿರ ಚದರಡಿ ವಿಸ್ತೀರ್ಣದಲ್ಲಿ ದಟ್ಟವಾದ ಹೊಗೆ ಹೊರಸೂಸುವ ಈ ಯಂತ್ರ ಹೆಚ್ಚೂಕಮ್ಮಿ ಅರ್ಧಗಂಟೆ ಕಾಲ ಕಳ್ಳರ ದೃಷ್ಟಿಯನ್ನು ಮಸುಕಾಗಿಸಿಬಿಡುತ್ತದೆ. ಹೀಗಾಗಿ ಕಳ್ಳರು ಹೆದರಿ ಪರಾರಿಯಾಗಲು ಯತ್ನಿಸಿದರೂ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ.