More

    ಭ್ರಷ್ಟರ ಲೂಟಿಯ ಹಣ ಜನರಿಗೇ ವಾಪಸ್: ಚುನಾವಣಾ ರ‍್ಯಾಲಿಯಲ್ಲಿ ಮೋದಿ ಗ್ಯಾರಂಟಿ

    ರಾಜಮಹೇಂದ್ರವರಂ(ಆಂಧ್ರಪ್ರದೇಶ): ಭ್ರಷ್ಟಾಚಾರದ ಮೂಲಕ ಲೂಟಿ ಮಾಡಲಾದ ಹಣ ಜನರಿಗೆ ವಾಪಸ್ ನೀಡುವುದು ಹೇಗೆ ಎನ್ನುವ ಕುರಿತು ಕಾನೂನು ಸಲಹೆ ಪಡೆಯುತ್ತಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಜಾರ್ಖಂಡ್ ಸಚಿವರೊಬ್ಬರ ಸಹಾಯಕರಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ನಗದು ರಾಶಿ ಬಗ್ಗೆ ಉಲ್ಲೇಖಿಸಿದ ಮೋದಿ, ಕಾಂಗ್ರೆಸ್​ನ ಮೊದಲ ಕುಟುಂಬಕ್ಕೆ ಅಂಥವರು ಯಾಕೆ ಹತ್ತಿರವಾಗಿರುತ್ತಾರೆ? ಎಂದು ಅಚ್ಚರಿ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಮಟ್ಟದ ನಗದು ವಶ ಇದೇ ಮೊದಲಲ್ಲ. ಈ ಹಿಂದೆಯೂ ಜಾರ್ಖಂಡ್ ಸಂಸದರೊಬ್ಬರ ಮನೆಯಿಂದ ಭಾರಿ ಹಣ ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಎಣಿಸುವಲ್ಲಿ ಯಂತ್ರಗಳೂ ಸುಸ್ತಾಗಿದ್ದವು ಎಂದು ಮೋದಿ ಹೇಳಿದರು. ತೆಲುದೇಶಂ ಪಕ್ಷದ ನಾಯಕ ನಾರಾ ಲೋಕೇಶ್ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಜತೆಗೆ ಸೋಮವಾರ ವೇಮಗಿರಿಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

    ವಶಪಡಿಸಿಕೊಳ್ಳಲಾದ ಹಣ ಕಾಂಗ್ರೆಸ್​ಗೆ ಕಳುಹಿಸಲಿಕ್ಕೆ ಇರಿಸಿಕೊಂಡಿದ್ದೇ? ಕಾಂಗ್ರೆಸ್ ಮೊದಲ ಕುಟುಂಬ ಕಪು್ಪಹಣದ ಗೋದಾಮುಗಳನ್ನು ಸೃಷ್ಟಿಸಿದೆಯೇ? ಇದನ್ನು ಕಾಂಗ್ರೆಸ್ ಯುವರಾಜನಿಂದ ದೇಶ ತಿಳಿಯಲು ಬಯಸುತ್ತಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಯಾವಾಗೆಲ್ಲ ಕಪು್ಪಹಣ ವಶಪಡಿಸಿಕೊಳ್ಳಲಾಗುತ್ತದೋ ಆಗೆಲ್ಲ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟದ ನಾಯಕರು ನನ್ನ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ನಾನು ಆ ನಿಂದೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವ ಬಡವರಿಂದ ಆ ಹಣ ಲೂಟಿ ಮಾಡಿದ್ದಾರೋ ನಾನು ಅವರ ಬಗ್ಗೆ ಚಿಂತಿಸುತ್ತಿರುತ್ತೇನೆ. ಆ ಹಣ ಬಡವರಿಗೆ ತಲುಪಿಸುವ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದೇನೆ. ಇದುವರೆಗೆ ಬರಿ ಜಾರಿ ನಿರ್ದೇಶನಾಲಯ ಒಂದರಿಂದಲೇ 1.25 ಲಕ್ಷ ಕೋಟಿ ರೂ. ಮೊತ್ತದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದ್ದು, ಇತರ ಏಜೆನ್ಸಿಗಳದ್ದೂ ಸೇರಿದರೆ ಈ ಮೊತ್ತ ಇನ್ನೂ ಅಧಿಕವಾಗಲಿದೆ. 17 ಸಾವಿರ ಕೋಟಿ ರೂ. ಅದರ ನಿಜವಾದ ವಾರಸುದಾರರಿಗೆ ಮರಳಿಸಲಾಗಿದ್ದು, ಬಡವರ ಹಕ್ಕುಗಳಿಗೆ ಎಂದಿಗೂ ಧಕ್ಕೆ ಆಗದು. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ಭರವಸೆ ನೀಡಿದರು.

    ಬಿಜೆಡಿ ಅವಧಿ ಜೂ.4ಕ್ಕೆ ಮುಕ್ತಾಯ

    ಬೆಹ್ರಂಪುರ: ಒಡಿಶಾದಲ್ಲಿ ಜೂ. 4ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವಾಗಲೇ ಬಿಜು ಜನತಾ ದಳ ಸರ್ಕಾರದ ಅವಧಿ ಮುಗಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದರು. ಒಡಿಶಾದಲ್ಲಿ ಬಿಜೆಡಿ ಮುಳುಗುತ್ತಿರುವ ಸೂರ್ಯ, ಕಾಂಗ್ರೆಸ್ ಜಜ್ಜರಿತವಾಗಿದೆ, ಜನರಿಗೆ ಬಿಜೆಪಿಯೊಂದೇ ಆಶಾಕಿರಣವಾಗಿದೆ. ಜನರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಒಡಿಶಾವನ್ನು ನಂ. 1 ರಾಜ್ಯವಾಗಿಸಲು ಅವಕಾಶ ಮಾಡಿಕೊಡಿ ಎಂದು ಮೋದಿ ಹೇಳಿದರು.

    ರಾಮಮಂದಿರಕ್ಕೆ ಭೇಟಿ ನೀಡಿದ ಕಾಂಗ್ರೆಸ್ಸಿಗರ ವಜಾ: ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ಕಾಂಗ್ರೆಸಿಗರನ್ನು ಪಕ್ಷದಿಂದ ವಜಾ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು. ಆಂಧ್ರಪ್ರದೇಶದ ರಾಜಮಂಡ್ರಿಯ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾನುವಾರವಷ್ಟೇ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದ ರಾಧಿಕಾ ಖೇರ ಪ್ರಕರಣ ಉಲ್ಲೇಖಿಸಿ ಈ ವಿಷಯ ಪ್ರಸ್ತಾಪಿಸಿದರು. ರಾಮ ಮಂದಿರಕ್ಕೆ ಭೇಟಿ ನೀಡಿದ್ದ ಕಾರಣಕ್ಕೆ ಪಕ್ಷದವರು ಕಿರುಕುಳ ನೀಡಿದ್ದರೆಂದು ಹೇಳಿ ರಾಧಿಕಾ ರಾಜೀನಾಮೆ ನೀಡಿದ್ದರು ಎಂದ ಮೋದಿ, ಓಲೈಕೆ ರಾಜಕಾರಣಕ್ಕಾಗಿಯೇ ಕಾಂಗ್ರೆಸ್ ರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಬಹಿಷ್ಕರಿಸಿತ್ತು ಎಂದರು.

    ರಾಮಧ್ವಜ ಹಾರಿಸಿದ್ದಕ್ಕೆ ದೌರ್ಜನ್ಯ

    ನವದೆಹಲಿ: ರಾಮಮಂದಿರ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ಭಾನುವಾರವಷ್ಟೇ ಕಾಂಗ್ರೆಸ್​ನ ಮಾಧ್ಯಮದ ರಾಷ್ಟ್ರೀಯ ಸಂಚಾಲಕಿ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ನಾಯಕಿ ರಾಧಿಕಾ ಖೇರ, ಕಾಂಗ್ರೆಸ್​ನಲ್ಲಿ ತಾವು ಅನುಭವಿಸಿದ್ದ ಕಷ್ಟಗಳ ಕುರಿತು ಸೋಮವಾರ ವಿವರಿಸಿದ್ದಾರೆ. ತಮ್ಮ ಮಾಜಿ ಪಕ್ಷದ ಕೆಲವು ನಾಯಕರು ಛತ್ತೀಸ್​ಗಢ ಕಾಂಗ್ರೆಸ್ ಕಚೇರಿಯ ಕೋಣೆಯಲ್ಲಿ ಕೂಡಿ ಹಾಕಿ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಧಿಕಾ, ತಮ್ಮ ಮನೆಯಲ್ಲಿ ಶ್ರೀರಾಮನ ಧ್ವಜ ಹಾರಿಸಿದಾಗಿನಿಂದ ಕಾಂಗ್ರೆಸ್ ತಮ್ಮ ವಿರುದ್ಧ ದಾಳಿ ನಡೆಸಲಾರಂಭಿಸಿತು ಎಂದಿದ್ದಾರೆ. ಧರ್ಮದ ಕುರಿತು ಮಾತನಾಡುವುದು ತಪ್ಪೇ? ನನ್ನನ್ನು ಆಗಾಗ್ಗೆ ನಿಂದಿಸುತ್ತಿದ್ದರು. ರಾಹುಲ್ ಗಾಂಧಿ ನ್ಯಾಯಯಾತ್ರೆ ಛತ್ತೀಸ್​ಗಢದಲ್ಲಿದ್ದಾಗ ಮಾಧ್ಯಮ ಅಧ್ಯಕ್ಷ ಸುಶೀಲ್ ಗುಪ್ತ ನನಗೆ ಮದ್ಯ ನೀಡಲು ಬಂದರು. ಕುಡಿದ ಸ್ಥಿತಿಯಲ್ಲಿದ್ದ ಅವರೆಲ್ಲ ತಡರಾತ್ರಿಯಲ್ಲಿ ನನ್ನ ಕೋಣೆಯ ಬಾಗಿಲು ಬಡಿದಿದ್ದರು ಎಂದು ರಾಧಿಕಾ ಗಂಭೀರ ಆರೋಪ ಮಾಡಿದ್ದಾರೆ. ಸುಶೀಲ್ ಆನಂದ್ ಶುಕ್ಲ ಅವರನ್ನು ಏ.30ರ ಸಂಜೆ ನಾನು ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಆಗಲು ಹೋಗಿದ್ದಾಗ ಅವರು ಕಿರುಚಾಡಿ ನನ್ನನ್ನು ನಿಂದಿಸಿದ್ದರು, ಕೋಣೆಯಲ್ಲಿ ಕೂಡಿ ಹಾಕಿದ್ದರು. ಅವರು ಹಾಗೂ ಇತರ ಇಬ್ಬರು ರಾಜ್ಯ ವಕ್ತಾರರು ನನ್ನನ್ನು ನಿಂದಿಸಿದ್ದರು. ನಾನು ಕೂಗಿದ್ದರೂ ಯಾರೂ ಬಾಗಿಲು ತೆರೆಯಲಿಲ್ಲ. ನನ್ನ ಮೇಲೆ ದೌರ್ಜನ್ಯ ನಡೆಸಲಾಗಿತ್ತು, ಈ ಬಗ್ಗೆ ಕಾಂಗ್ರೆಸ್​ನ ಹಿರಿಯರಿಗೆ ದೂರು ನೀಡಿದ್ದರೂ ಅದರತ್ತ ಯಾರೂ ಗಮನ ಹರಿಸಲಿಲ್ಲ ಎಂದು ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಧಿಕಾ ಖೇರ ಅವರನ್ನು ಛತ್ತೀಸ್​ಗಢದ ಮಾಧ್ಯಮ ಸಂಚಾಲಕಿಯನ್ನಾಗಿ ನೇಮಿಸಲಾಗಿತ್ತು.

    ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ತೋರಬೇಕಾಗಿಲ್ಲ: ಕಾಂಗ್ರೆಸ್‌ನ ನಡೆಯನ್ನು ಪ್ರಶ್ನಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts