ಮನಮೋಹನ್ ಸಿಂಗ್ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ನನಗೆ ಚೆನ್ನಾಗಿ ನೆನಪಿದೆ: ಪ್ರಧಾನಿ ಮೋದಿ

Modi Manmohan Singh
Published on

ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್​ ಸದಸ್ಯರು ಕಪ್ಪು ಪತ್ರ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ ಅದನ್ನು ಕಾಲಾ ಟೀಕಾ ಎಂದು ಕರೆದಿದ್ದಾರೆ. ನಮ್ಮ ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ನೋಡಿ ಕಾಂಗ್ರೆಸ್​ ಸದಸ್ಯರು ದುಷ್ಟ ಕಣ್ಣುಗಳು ಬೀಳದೆ ಇರಲಿ ಎಂದು ಕಪ್ಪು ಕಾಗದ ಬಿಡುಗಡೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರತಿಭಟನೆಯ ಸಂಕೇತವಾಗಿ ಸದನದಲ್ಲಿ ವಿರೋಧ ಪಕ್ಷದ ಸಂಸದರು ಕಪ್ಪು ನಿಲುವಂಗಿಯನ್ನು ಧರಿಸಿದ್ದಾರೆ. ಕೆಲವು ಸದಸ್ಯರು ಕಪ್ಪು ಬಟ್ಟೆಯಲ್ಲಿ ಬಂದಾಗ ನಾವು ರಾಜ್ಯಸಭೆಯಲ್ಲಿ ಫ್ಯಾಷನ್ ಪರೇಡ್ಅನ್ನು ಸಹ ನೋಡಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ನಿವೃತ್ತರಾಗಲಿರುವ ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ನಾನು ಇಂದು ಮನಮೋಹನ್‌ ಸಿಂಗ್‌ ಅವರನ್ನು ಸ್ಮರಿಸುತ್ತೇನೆ. ಅವರ ಕೊಡುಗೆ ಅಪಾರವಾಗಿದೆ. ಡಾ.ಮನಮೋಹನ್ ಸಿಂಗ್ ಅವರು ಇಷ್ಟು ದಿನ ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಸದನದಲ್ಲಿ ಮತದಾನದ ವೇಳೆ ಆಡಳಿತ ಪಕ್ಷವೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ಡಾ.ಮನಮೋಹನ್ ಸಿಂಗ್ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ಕೂಡ ನನಗೆ ಚೆನ್ನಾಗಿ ನೆನಪಿದೆ. ಅವರು ಯಾರಿಗೆ ಅಧಿಕಾರ ಕೊಡಲು ಬಂದಿದ್ದರು ಎಂಬುದು ಪ್ರಶ್ನೆಯಲ್ಲ. ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲು ಬಂದಿದ್ದರು. ಸದಸ್ಯರು ತಮ್ಮ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ಮನಮೋಹನ್ ಸಿಂಗ್ ಎಲ್ಲ ಸಂಸದರಿಗೆ ಸ್ಫೂರ್ತಿ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net