ಒಬ್ಬ ಆಟಗಾರನಾಗಿ ನಾನು... ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ಬೆನ್ನಲ್ಲೇ Mohammed Shami ಫಸ್ಟ್ ರಿಯಾಕ್ಷನ್​​

Mohammed Shami
Published on

ಮುಂಬೈ: ಜನವರಿ 22ರಿಂದ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಮೊಹಮದ್​ ಶಮಿ (Mohammed Shami) ಸುಮಾರು 14 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ವಾಪಸ್​ ಆಗಿದ್ದಾರೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್​ ಬಳಿಕ ತಂಡದಿಂದ ದೂರ ಉಳಿದಿದ್ದ ಶಮಿ ಇಂಗ್ಲೆಂಡ್​ ವಿರುದ್ಧದ ಸರಣಿಯಿಂದ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮುನ್ನ ಶಮಿ (Mohammed Shami) ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 11 ವಿಕೆಟ್‌ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಐದು ವಿಕೆಟ್​ಗಳನ್ನು ಪಡೆಯುವ ಮೂಲಕ ತಮ್ಮ ಫಾರ್ಮ್​ ನಿರೂಪಿಸಿದ್ದು. ಮುಂಬರುವ ಚಾಂಪಿಯನ್ಸ್​ ಟ್ರೋಫಿಗೂ ಆಯ್ಕೆಯಾಗುವುದು ಪಕ್ಕಾ ಎಂದು ಹೇಳಲಾಗಿದೆ. ಈ ಬಗ್ಗೆ ಶಮಿ ಮಾತನಾಡಿದ್ದು, ಚಾಂಪಿಯನ್ಸ್​ ಟ್ರೋಫಿಯಲ್ಲೂ ತಮ್ಮ ಪುನರಾಗಮನದ ಬಗ್ಗೆ ಉಲ್ಲೇಖಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶಮಿ (Mohammed Shami), ದೇವರು ಬಯಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಒಬ್ಬ ಆಟಗಾರನಿಗೆ ಆತನ ಆಟವೇ ಸರ್ವಸ್ವವಾಗಿರುತ್ತದೆ. ಅದಿಲ್ಲದೇ ಜೀವನ ಅಪೂರ್ಣವೆನಿಸುತ್ತದೆ. ಒಬ್ಬ ಆಟಗಾರನಾಗಿ ನಾನು ಚೆಂಡನ್ನು ಕೈಗೆತ್ತಿಕೊಳ್ಳಲಾಗದಿದ್ದರೆ ನಾನು ಜೀವನವನ್ನು ಹೇಗೆ ಆನಂದಿಸಲಿ. ಜೀವನವು ತುಂಬಾ ಕಷ್ಟಕರವಾಗಿತ್ತು. ದೇಶಕ್ಕಾಗಿ ಆಡುವುದು ಸಾಕಷ್ಟು ಪ್ರೇರಣೆಯಾಗಿದೆ. ನನ್ನ ಪುನರ್ವಸತಿ ಸಮಯದಲ್ಲಿ ನಾನು ಪ್ರತಿದಿನ ಭಾರತದ ಜೆರ್ಸಿಯನ್ನು ನೋಡುತ್ತಿದ್ದೆ ಎಂದು ಶಮಿ ಹೇಳಿದ್ದಾರೆ. 

2023ರ ನ.19ರಂದು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದ 34 ವರ್ಷದ ಶಮಿ (Mohammed Shami), ಪಾದದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಮರಳಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಆಡಿ ಫಿಟ್ನೆಸ್​ ಸಾಬೀತುಪಡಿಸಿರುವ ಶಮಿ, ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ಆಡುವ ಸಾಧ್ಯತೆ ಹೆಚ್ಚಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net