

ಮುಂಬೈ: ಬಾರ್ಡರ್-ಗವಾಸ್ಕರ್ ಟ್ರೋಫಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ಆಡಬೇಕಿದ್ದು, ಟಿ20 ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಹಾಗೂ ಟೆಸ್ಟ್ ಮಾದರಿಗೆ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಟಿ20 ವಿಚಾರಕ್ಕೆ ಬರುವುದಾದರೆ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಸಹಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಿದ್ದ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಕೆ.ಎಲ್. ರಾಹುಲ್ಗೆ (KL Rahul) ರೆಸ್ಟ್ ನೀಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೆ.ಎಲ್. ರಾಹುಲ್ (KL Rahul) ಕಮ್ಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತಾದರೂ ಕಾರಣಾಂತರಗಳಿಂದ ಆಯ್ಕೆ ಮಾಡಲಾಗಿಲ್ಲ. ಏತನ್ಮಧ್ಯೆ, ಏಕದಿನ ಸರಣಿಯಿಂದಲೂ ಕೂಡ ರಾಹುಲ್ಗೆ ರೆಸ್ಟ್ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಫೆ.19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.
ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬಸಿಸಿಐ ರಾಹುಲ್ರನ್ನು (KL Rahul) ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಹಠಾತ್ ಯು-ಟರ್ನ್ ತೆಗೆದುಕೊಂಡಿದೆ. ಈ ಹಿಂದೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿದ ವರದಿಗಳಲ್ಲಿ ರಾಹುಲ್ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಅವರಿಗೆ ಏಕದಿನ ಸರಣಿಯಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಬಿಸಿಸಿಐ ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಿದ್ದು, ಇದೀಗ ಏಕದಿನ ಸರಣಿಯಲ್ಲಿ ಆಡುವಂತೆ ರಾಹುಲ್ ಜತೆ ಚರ್ಚಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ರಾಹುಲ್ಗೆ (KL Rahul) ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಸದಸ್ಯರು ಆರಂಭದಲ್ಲಿ ನಿರ್ಧರಿಸಿದ್ದರು. ಮಧ್ಯಮಕ್ರಮಾಂಕದಲ್ಲಿ ಆಡುವ ರಾಹುಲ್ ವಿಕೆಟ್ ಕೀಪರ್ ಕೂಡ ಆಗಿದ್ದು, ಆಯ್ಕೆ ಸಮಿತಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಿದೆ. ಈ ಸಂಬಂಧ ರಾಹುಲ್ ಜತೆ ಆಯ್ಕೆ ಸಮಿತಿ ಸದಸ್ಯರು ಚರ್ಚೆ ನಡೆಸಿದ್ದು, ಏಕದಿನ ಸರಣಿಯಲ್ಲಿ ಆಡುವಂತೆ ಕೇಳಿಕೊಂಡಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಅವರಿಗೆ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಟ್ರೆಲಿಯಾದಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎಲ್ಲ 5 ಪಂದ್ಯಗಳಲ್ಲಿ ಆಡಿರುವ ರಾಹುಲ್ (KL Rahul), ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಯಾವುದೇ ಪಂದ್ಯ ಆಡುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಅವರು ಪ್ರಮುಖ ಸದಸ್ಯರಾಗಿರುತ್ತಾರೆ ಎನ್ನಲಾಗಿದೆ. ರಾಹುಲ್ ಇಂಗ್ಲೆಂಡ್ ವಿರುದ್ಧ ಸರಣಿಯಿಂದ ವಿಶ್ರಾಂತಿ ಕೇಳಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಲಭ್ಯರಿರುವುದಾಗಿ ತಿಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ರಾಹುಲ್ ಈಗಾಗಲೆ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ತಂಡದಿಂದಲೂ ವಿಶ್ರಾಂತಿ ಕೇಳಿದ್ದರು. ಆದರೆ ಜನವರಿ 23ರಿಂದ ನಡೆಯಲಿರುವ ರಣಜಿ ಟ್ರೋಫಿ 2ನೇ ಹಂತದ ಪಂದ್ಯಗಳಿಗೆ ಲಭ್ಯರಾಗುವರೇ ಎಂಬುದು ಸ್ಪಷ್ಟವಿಲ್ಲ.