Heart Attack ಆಗಿ 3ನೇ ತರಗತಿ ವಿದ್ಯಾರ್ಥಿನಿ ಸಾವು; ಆಘಾತಕಾರಿ ವಿಡಿಯೋ ವೈರಲ್​

Heart Attack
Published on

ಅಹಮದಾಬಾದ್: ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚು ಬಲಿ ಪಡೆಯುತ್ತಿದ್ದು, ಇದಕ್ಕೆ ವಯಸ್ಸಿನ ಭೇದ ಇಲ್ಲದಂತಾಗಿದೆ. ಇದೀಗ 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಗಾರ್ಗಿ ರಣಪರಾ (08) ಎಂದು ಗುರುತಿಸಲಾಗಿದ್ದು, ಶಾಲೆಯ ಕಾರಿಡಾರ್​ನಲ್ಲಿ ವಿದ್ಯಾರ್ಥಿನಿ ಕುಸಿದು ಬೀಳುತ್ತಿರುವ ವಿಡಿಯೋ ವೈರಲ್​ ಆಗಿದೆ.

ಶಾಲಾ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಸಿಸಿಟವಿ ದೃಶ್ಯ ನೋಡವುದಾದರೆ ಶಾಲೆಯ ಕಾರಿಡಾರ್​ನಲ್ಲಿ ವಿದ್ಯಾರ್ಥಿನಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ನಡೆಯುವ ವೇಳೆ ಆಕೆ ಸುಸ್ತಾಗಿ ಅಲ್ಲೇ ಇದ್ದ ಚೇರ್​ ಮೇಲೆ ಕೂರುತ್ತಾಳೆ. ಇದನ್ನು ಗಮನಿಸಿದ ಸಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಕೆಯ ನೆರವಿಗೆ ಧಾವಿಸಿದ್ದು, ನೋಡನೋಡುತ್ತಿದ್ದಂತೆ ಆಕೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಹೃದಯಾಘಾತದಿಂದ (Heart Attack) ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ವಾರದ ಆರಂಭದಲ್ಲಿ ಕರ್ನಾಟಕದ ಚಾಮರಾಜದಲ್ಲೂ ಕೂಡ ಇದೇ ರೀತಿಯ ಘಟನೆ ನಡೆದಿತ್ತು. 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಳು. ಇದೀಗ ಇದೇ ರೀತಿಯ ಘಟನೆ ಅಹಮದಾಬಾದಿನಲ್ಲಿ ನಡೆದಿದ್ದು, ಪೋಷಕರಲ್ಲಿ ಮಕ್ಕಳ ಆರೋಗ್ಯದ ಬಗೆಗಿನ ಆತಂಕವನ್ನು ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net