

ನವದೆಹಲಿ: ಚೀನಾ ಮೇಲಿನ ಅವಲಂಬನೆ ತಪ್ಪಿಸುವ ಉದ್ದೇಶದಿಂದ ಸ್ಥಳೀಯವಾಗಿ ಅಪರೂಪದ ಭೂಖನಿಜಗಳು ಮತ್ತು ಅಯಸ್ಕಾಂತಗಳ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಭಾರಿ ಕೈಗಾರಿಕೆ ಮತ್ತು ಗಣಿಗಾರಿಕೆ ಸಚಿವಾಲಯಗಳು ಮುಂದಾಗಿವೆ. ದೇಶೀ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ಮಾರ್ಗಸೂಚಿಗಳನ್ನು ರೂಪಿಸಲು ಸಮಾಲೋಚನೆ ಶುರು ಮಾಡಿದೆ.
ನೀತಿಯ ಕರಡನ್ನು ಶೀಘ್ರದಲ್ಲೇ ಸಂಪುಟದ ಒಪ್ಪಿಗೆಗಾಗಿ ಸಲ್ಲಿಸುವ ಸಾಧ್ಯತೆಯಿದೆ. ಉದ್ದೇಶಿತ ಯೋಜನೆ ಖಾಸಗಿ ಮತ್ತು ಸರ್ಕಾರಿ ಎರಡೂ ವಲಯಗಳಿಗೆ ಅನ್ವಯವಾಗಲಿದೆ. 7 ವರ್ಷಗಳ ಅವಧಿಯಲ್ಲಿ ಸ್ಥಳೀಯವಾಗಿ ಗಣಿಗಾರಿಕೆ ಮಾಡಿದ ಕಚ್ಚಾ ವಸ್ತುಗಳನ್ನು ಬಳಸಿ ಸುಮಾರು 4,000 ಟನ್ಗಳಷ್ಟು ನಿಯೋಡಿಮಿಯಂ ಮತ್ತು ಪ್ರಾಸಿಯೋಡಿಮಿಯಂ ಆಧಾರಿತ ಮ್ಯಾಗ್ನೆಟ್ಗಳ ಉತ್ಪಾದನೆಗೆ 3-4 ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡುವ ಯೋಚನೆ ಸರ್ಕಾರಕ್ಕಿದೆ ಎನ್ನಲಾಗಿದೆ.
ಉದ್ದೇಶಿತ ಯೋಜನೆಯ ಪ್ರಕಾರ, ವಾರ್ಷಿಕ 500ರಿಂದ 1,500 ಟನ್ ಉತ್ಪಾದನಾ ಸಾಮರ್ಥ್ಯ ಇರುವ ಕಂಪನಿಗಳಿಂದ ಸರ್ಕಾರ ಬಿಡ್ ಆಹ್ವಾನಿಸಲಿದೆ. ಕಟ್ಟುನಿಟ್ಟಾದ ಮಾನದಂಡಗಳನ್ನು ಕಂಪನಿಗಳು ಪೂರೈಸಬೇಕಾಗುತ್ತದೆ ಎನ್ನಲಾಗಿದೆ. ರೇರ್ ಅರ್ಥ್ ಮ್ಯಾಗ್ನೆಟ್ ತಯಾರಕರಿಗೆ ಉತ್ತೇಜನ ನೀಡಲಾಗುವುದೆಂದು ಭಾರಿ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕಳೆದ ತಿಂಗಳು ದೆಹಲಿಯಲ್ಲಿ ಹೇಳಿದ್ದರು. ಆದರೆ ವಿವರ ಬಹಿರಂಗಪಡಿಸಿರಲಿಲ್ಲ.
ದೊಡ್ಡ ಕಂಪನಿಗಳ ಆಸಕ್ತಿ: ಈ ಮ್ಯಾಗ್ನೆಟ್ಗಳ ಉತ್ಪಾದನೆಗೆ 2500 ಕೋಟಿ ರೂ. ಮೌಲ್ಯದ ಯೋಜನೆಯನ್ನು ಭಾರತ ಸರ್ಕಾರ ರೂಪಿಸುತ್ತಿದೆ ಎನ್ನಲಾಗಿದ್ದು ಇದರ ಬಗ್ಗೆ ಈಗಾಗಲೇ ಶತಕೋಟ್ಯಧಿಪತಿ ಅನಿಲ್ ಅಗರ್ವಾಲ್ರ ವೇದಾಂತಗ್ರೂಪ್, ಸಜ್ಜನ್ ಜಿಂದಾಲ್ರ ಜೆಎಸ್ಡಬ್ಲ್ಯೂ, ಇವಿ ಬಿಡಿಭಾಗಗಳ ತಯಾರಕ ಸೋನಾ ಬಿಎಲ್ಡಬ್ಲ್ಯೂ ಪ್ರಿಸಿಷನ್ ಫೋರ್ಜಿಂಗ್ಸ್ ಮುಂತಾದ ಹಲವಾರು ದೊಡ್ಡ ಕಂಪನಿಗಳು ಆಸಕ್ತಿ ತೋರಿಸಿವೆ.
ಸಮರಿಯಮ್ ಗ್ಯಾಡೋಲಿನಿಯಮ್ ಟರ್ಬಿಯಮ್ ಡಿಸ್ಪ್ರೋಸಿಯಮ್ ಮತ್ತು ಲುಟೆಟಿಯಮ್ ಖನಿಜಗಳನ್ನು ಎಲೆಕ್ಟ್ರಿಕ್ ಮೋಟಾರ್, ಬ್ರೇಕಿಂಗ್ ಸಿಸ್ಟಮ್ ಸ್ಮಾರ್ಟ್ ಫೋನ್, ಕ್ಷಿಪಣಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಟೆಲಿಕಾಂ, ಎಲೆಕ್ಟ್ರಿಕ್ ವಾಹನ (ಇವಿ) ಮತ್ತು ಇತರ ಹಲವು ಉದ್ಯಮಗಳಲ್ಲೂ ಇವು ಅತ್ಯಗತ್ಯ.
ಈ ಕಚ್ಚಾ ವಸ್ತುಗಳನ್ನು ಹಲವಾರು ದಶಕಗಳಿಂದ ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಇಡೀ ವಿಶ್ವದಲ್ಲೇ ಈ ಖನಿಜಗಳನ್ನು ಪೂರೈಸುವಲ್ಲಿ ಚೀನಾ ಅಗ್ರಗಣ್ಯ ರಾಷ್ಟ್ರವಾಗಿದ್ದು, ಭಾರತಕ್ಕೆ ಇವುಗಳ ಪೂರೈಕೆಯನ್ನು ಕಳೆದ ಏಪ್ರಿಲ್ನಿಂದ ಏಕಾಏಕಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಭಾರತೀಯ ಉದ್ಯಮಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 540 ಟನ್ ರೇರ್ ಅರ್ಥ್ ಸಾಮಗ್ರಿಯನ್ನು ಭಾರತ ಆಮದು ಮಾಡಿಕೊಂಡಿದ್ದು, ಅದರಲ್ಲಿ ಶೇ. 80ರಷ್ಟು ಚೀನಾದಿಂದ ಬಂದಿತ್ತು. ಜಾಗತಿಕ ರೇರ್ ಅರ್ಥ್ ಮ್ಯಾಗ್ನೆಟ್ ಸಂಸ್ಕರಣೆಯ ಶೇ. 90ರಷ್ಟನ್ನು ಚೀನಾ ನಿರ್ವಹಿಸುತ್ತಿದೆ.