

Shubman Gill: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡುತ್ತಿರುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತೇ ಇದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶತಕದಾಟ ತೋರಿದ ಗಿಲ್, ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ, ದಾಖಲೆಯ ದ್ವಿಶತಕ (269 ರನ್) ಗಳಿಸಿದರು. ಇದರೊಟ್ಟಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಸೆಂಚುರಿ ದಾಖಲಿಸಿದರು.
ಇದರೊಂದಿಗೆ, ಗಿಲ್ (430) ಟೆಸ್ಟ್ ಪಂದ್ಯದಲ್ಲಿ ಭಾರತೀಯರ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತದ 336 ರನ್‌ಗಳ ಗೆಲುವಿನಲ್ಲಿ ಗಿಲ್ ತಮ್ಮ ಎಂದಿನ ಪ್ರದರ್ಶನದೊಂದಿಗೆ ಪ್ರಮುಖ ಪಾತ್ರ ವಹಿಸಿರುವುದು ಟೀಮ್ ಇಂಡಿಯಾಗೆ ಆನೆ ಬಲ ತಂದಿದೆ. ಇನ್ನು ಗುರುವಾರದಿಂದ (ಜು.10) ಲಾರ್ಡ್ಸ್‌ನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ಗಿಲ್ ಮಗದೊಮ್ಮೆ ಶತಕದಾಟ ತೋರಲಿದ್ದಾರೆ ಎಂದೇ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದಾರೆ.
ಮೂರನೇ ಟೆಸ್ಟ್‌ನಲ್ಲಿ ಮೊದಲು ಹಾಗೂ ಎರಡನೇ ಟೆಸ್ಟ್‌ನಲ್ಲಿ ತೋರಿದ ಅಬ್ಬರದ ಪ್ರದರ್ಶನವನ್ನೇ ಗಿಲ್ ಇಲ್ಲಿಯೂ ಮುಂದುವರಿಸಿದರೆ, ಹಲವು ಅಪರೂಪದ ದಾಖಲೆಗಳು ಅವರ ಮುಡಿಗೇರುವುದು ಖಚಿತ. ಹಾಗಿದ್ದರೆ, ಯಾವೆಲ್ಲ ರೆಕಾರ್ಡ್ಗಳು ಕ್ಯಾಪ್ಟನ್ ಶುಭಮನ್ ಗಿಲ್ ತೆಕ್ಕೆಗೆ ಸೇರಲಿವೆ? ಎಷ್ಟು ರನ್‌ಗಳ ಅಗತ್ಯವಿದೆ? ಎಂಬುದರ ವಿವರ ಹೀಗಿದೆ ನೋಡಿ.
ಮುಂದಿನ ಪಂದ್ಯದಲ್ಲಿ ಗಿಲ್ 225 ರನ್ ಗಳಿಸಲು ಸಾಧ್ಯವಾದರೆ, ಟೆಸ್ಟ್ ಸರಣಿಯಲ್ಲಿ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚು ರನ್ ದಾಖಲಿಸಿದ ವಿಶ್ವ ದಾಖಲೆಯನ್ನು ಗಿಲ್ ಸೃಷ್ಟಿಸಲಿದ್ದಾರೆ. ಪ್ರಸ್ತುತ, ಈ ದಾಖಲೆ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧ 810 ರನ್ ಗಳಿಸಿದ್ದರು. ಗಿಲ್ ಈಗಾಗಲೇ ಈ ಸರಣಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾರೆ. ಲಾರ್ಡ್ಸ್ ಪಿಚ್ನಲ್ಲಿ ಬ್ರಾಡ್ಮನ್ ಅವರ ದಾಖಲೆಯನ್ನು ಗಿಲ್ ಮುರಿಯಲು ಸಾಧ್ಯವಾಗದಿದ್ದರೂ, ಉಳಿದ ಎರಡು ಪಂದ್ಯಗಳಲ್ಲಿ ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ.
ಅದೇ ರೀತಿ, ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರನಾಗುವ ಅವಕಾಶ ಗಿಲ್ ಎದುರಿಗಿದೆ. ವೆಸ್ಟ್ ಇಂಡೀಸ್ ಬ್ಯಾಟರ್ ಕ್ಲೈಡ್ ವಾಲ್ಕಾಟ್ 1955ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಒಂದೇ ಸರಣಿಯಲ್ಲಿ ಐದು ಶತಕಗಳನ್ನು ಗಳಿಸಿದ್ದರು. ಗಿಲ್ ಈ ಸರಣಿಯಲ್ಲಿ ಈಗಾಗಲೇ ಮೂರು ಶತಕಗಳನ್ನು ದಾಖಲಿಸಿರುವುದು ಗಮನಾರ್ಹ. ಈ ದಾಖಲೆ ಮುರಿಯಲು ಗಿಲ್ಗೆ ಕೇವಲ ಇನ್ನೂ ಎರಡು ಶತಕಗಳಷ್ಟೇ ಬೇಕಿದೆ.
ಇದಲ್ಲದೆ, ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ಇತಿಹಾಸದಲ್ಲಿ ಶುಭಮನ್ ಗಿಲ್ ಗುರುತಿಸಿಕೊಳ್ಳುತ್ತಾರೆ. ಪ್ರಸ್ತುತ ಟೀಮ್ ಇಂಡಿಯಾದ ದಿಗ್ಗಜ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, 4 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ,(ಏಜೆನ್ಸೀಸ್).