Places of Worship Act ಅರ್ಜಿ ವಿಚಾರಣೆ ಮುಗಿಯುವವರೆಗೆ ಹೊಸ ದಾವೆಗೆ ಅವಕಾಶವಿಲ್ಲ: Supreme Court

Supreme Court
Published on

ನವದೆಹಲಿ: ಧಾರ್ಮಿಕ ಸ್ಥಳಗಳ ವಿಶೇಷ ಕಾಯ್ದೆ 1991ರ (Places of Worship Act  1991) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಗಿಯುವವರೆಗೂ ಹೊಸ ದಾವೆಗಳನ್ನು ಸ್ವೀಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ (Supreme Court) ಆದೇಶಿಸಿದೆ.

ಪೂಜಾ ಕಾಯ್ದೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಸಂಜೀವ್ ಖನ್ನಾ, ಜಸ್ಟೀಸ್ ಸಂಜಯ್ ಕುಮಾರ್, ಜಸ್ಟೀಸ್ ಕೆ.ವಿ.ವಿಶ್ವನಾಥನ್ ಅವರಿದ್ದ ತ್ರಿಸದಸ್ಯ ಪೀಠು ಈ ಆದೇಶ ನೀಡಿದ್ದು, ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳ ನೋಂದಣಿಯನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ.

ಕಾನೂನಿಗೆ ಸಂಬಂಧಿಸಿದಂತೆ ತನ್ನ ಮುಂದೆ ಬಾಕಿ ಉಳಿದಿರುವ ಎಲ್ಲಾ ಪ್ರಸ್ತುತ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ, ವಿಲೇವಾರಿ ಮಾಡುವವರೆಗೆ ದೇಶದಲ್ಲಿ ಯಾವುದೇ ಹೊಸ ದಾವೆಗಳನ್ನು ನೋಂದಾಯಿಸಬಾರದು. ಧಾರ್ಮಿಕ ಸ್ವರೂಪವನ್ನು ವಿವಾದಿಸಿ ದಾಖಲಾದ ದಾವೆಗಳಲ್ಲಿ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ ವಿರುದ್ಧ ಆದೇಶಗಳನ್ನು ಅಥವಾ ಸಮೀಕ್ಷೆಗಳನ್ನು ನಡೆಸಲು ಆದೇಶಿಸಬಾರದು. ಮುಂದಿನ ಆದೇಶದವರೆಗೆ ದೇಶದಲ್ಲಿ ಪೂಜಾ ಸ್ಥಳಗಳ ವಿರುದ್ಧ ಯಾವುದೇ ದಾವೆಗಳನ್ನು ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಇದಲ್ಲದೆ ಅರ್ಜಿಗಳ ಕುರಿತು ಅಫಿಡವಿಟ್ ಸಲ್ಲಿಸಲು ಭಾರತ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಕಾಲಾವಕಾಶವನ್ನು ನೀಡಿದ್ದು, ಸರ್ವೋಚ್ಚ ನ್ಯಾಯಾಲಯವು ಯಾವುದೇ ವಿಚಾರಣಾ ನ್ಯಾಯಾಲಯ ಮಸೀದಿಗಳು ಅಥವಾ ದರ್ಗಾಗಳು ಇತ್ಯಾದಿಗಳ ವಿರುದ್ಧ ಬಾಕಿ ಇರುವ ಮೊಕದ್ದಮೆಗಳಲ್ಲಿ ಸಮೀಕ್ಷೆ ಆದೇಶಗಳನ್ನು ಒಳಗೊಂಡಂತೆ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸಬಾರದು ಎಂದು ಆದೇಶಿಸಿದೆ.

ಪೂಜಾ ಸ್ಥಳಗಳ ಕಾಯಿದೆ 1947ರ ಆಗಸ್ಟ್ 15ಕ್ಕಿಂತ ಮೊದಲಿನ ಧಾರ್ಮಿಕ ಸ್ಥಳಗಳನ್ನು ಬದಲಾಯಿಸುವಂತಿಲ್ಲ, ಆ ಪೂಜಾ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಬೇಕೆಂದು ಹೇಳಿತ್ತು. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾದ್ದರಿಂದ ಈ ಕಾಯಿದೆ ಏಕಪಕ್ಷೀಯವಾಗಿದೆ ಎಂದು ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ, ಸುಬ್ರಮಣಿಯನ್​ಸ್ವಾಮಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ (Supreme Court) ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net