21,382% ಏರಿಕೆ ಕಂಡ ಫಾರ್ಮಾ ಕಂಪನಿ ಷೇರು ಬೆಲೆ: ಸ್ವಾಧೀನ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್ ಸರ್ಕ್ಯೂಟ್ ಹಿಟ್​

remedium-1
Published on

ಮುಂಬೈ: ಸ್ಮಾಲ್ ಕ್ಯಾಪ್ ಫಾರ್ಮಾಸ್ಯುಟಿಕಲ್ಸ್ ವಲಯದ ಕಂಪನಿ ರೆಮಿಡಿಯಮ್ ಲೈಫ್‌ಕೇರ್ ಲಿಮಿಟೆಡ್ (Remedium Lifecare Ltd) ಷೇರುಗಳು ಗುರುವಾರದ ವಹಿವಾಟಿನಲ್ಲಿ 10% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್ ಆದವು. ಅಂತಿಮವಾಗಿ ಈ ಸ್ಟಾಕ್‌ ಬೆಲೆ 124.60 ರೂಪಾಯಿ ತಲುಪಿತು.

ರೆಮಿಡಿಯಮ್ ಲೈಫ್‌ಕೇರ್ 1255.97 ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಈ ಕಂಪನಿಯ ಷೇರುಗಳು ಕಳೆದ 1 ತಿಂಗಳಲ್ಲಿ 35% ಏರಿಕೆಯಾಗಿವೆ. ಕಳೆದ 1 ವರ್ಷದಲ್ಲಿ 2422% ಹೆಚ್ಚಳ ಕಂಡಿವೆ.

ಮಾರ್ಚ್ 7, 2024 ರಂದು ಕಂಪನಿಯು ಬಿಎಸ್‌ಇಗೆ ನೀಡಿದ ಹೇಳಿಕೆಯಲ್ಲಿ, "ಕಂಪನಿಯ ನಿರ್ದೇಶಕರ ಮಂಡಳಿಯು ತನ್ನ ಸಭೆಯಲ್ಲಿ ಹೈದರಾಬಾದ್‌ನಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಿದೆ. ತೆಲಂಗಾಣದಲ್ಲಿ 130680 ಚದರ ಅಡಿ ವಿಸ್ತೀರ್ಣದ ಸೌಲಭ್ಯವಾಗಿದೆ. ಈ ಘಟಕವು ಔಷಧೀಯ ಉದ್ಯಮಕ್ಕೆ ಮಧ್ಯವರ್ತಿ ವಸ್ತುಗಳನ್ನು ಉತ್ಪಾದಿಸಲು ಸುಸಜ್ಜಿತವಾಗಿದೆ. ಈ ಸಾಲ್ವೆಂಟ್ ರಿಕವರಿ ಪ್ಲಾಂಟ್ ಔಷಧೀಯ ಮತ್ತು ವಿಶೇಷ ರಾಸಾಯನಿಕಗಳ ವಲಯಕ್ಕೆ ಸೇವೆಗಳನ್ನು ನೀಡುತ್ತದೆ. ಈ ಘಟಕಕ್ಕೆ ಸರಿಸುಮಾರು ರೂ. 38 ಕೋಟಿ (ರೂಪಾಯಿ ಮೂವತ್ತೆಂಟು ಕೋಟಿಗಳು ) ಪಾವತಿಸಲಾಗುವುದು." ಎಂದು ತಿಳಿಸಿದೆ.

ಈ ಕಂಪನಿಯ ಷೇರುಗಳ 52-ವಾರಗಳ ಗರಿಷ್ಠ ಬೆಲೆ ರೂ 179.66 ಮತ್ತು ಕನಿಷ್ಠ ಬೆಲೆ ಕ್ರಮವಾಗಿ ರೂ 11.16 ಆಗಿದೆ. ಈ ಷೇರುಗಳ ಬೆಲೆ ಕಳೆದ 6-ತಿಂಗಳಲ್ಲಿ 17.58% ರಷ್ಟು ಕುಸಿದಿದೆ. ಕಳೆದ 1-ವರ್ಷದಲ್ಲಿ 961% ರ ಹೆಚ್ಚಳವಾಗಿದೆ. ಕಳೆದ 3 ವರ್ಷಗಳಲ್ಲಿ ಈ ಸ್ಟಾಕ್ ಬೆಲೆ 7316% ಮತ್ತು ಕಳೆದ 5 ವರ್ಷಗಳಲ್ಲಿ 21,382% ಏರಿಕೆ ಕಂಡಿದೆ.

ಕಂಪನಿಯ ಮಂಡಳಿಯು ಕಂಪನಿಯ ಷೇರು ವಿಭಜನೆಗೆ ಅನುಮೋದಿಸಿದೆ. 5 ರೂಪಾಯಿ ಮುಖಬೆಲೆಯ ಇಕ್ವಿಟಿ ಷೇರುಗಳನ್ನು 1 ರೂಪಾಯಿ ಮುಖಬೆಲೆಯ ಷೇರುಗಳಾಗಿ ವಿಭಜಿಸಲಾಗಿದೆ. ಇದಕ್ಕಾಗಿ ಫೆಬ್ರವರಿ 23, 2024 ಅನ್ನು ದಾಖಲೆ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. 2023 ರಲ್ಲಿ ರೆಮಿಡಿಯಮ್ ಲೈಫ್‌ಕೇರ್ ಬೋನಸ್ ಷೇರುಗಳನ್ನು ವಿತರಿಸಿದೆ. 9:5 ಅನುಪಾತದಲ್ಲಿ ಬೋನಸ್ ಹಂಚಿಕೆ ಮಾಡಿದ್ದು, ಇದಕ್ಕಾಗಿ ದಾಖಲೆ ದಿನಾಂಕವನ್ನು ಜುಲೈ 29, 2023 ಎಂದು ನಿಗದಿಪಡಿಸಿತ್ತು.

ರೆಮಿಡಿಯಮ್ ಲೈಫ್‌ಕೇರ್ ಒಂದು ಪ್ರಮುಖ ಔಷಧೀಯ ಕಂಪನಿಯಾಗಿದೆ. ಕಂಪನಿಯು ಫೆಬ್ರವರಿ 14, 2024 ರಂದು ಆರೋಗ್ಯಕರ ತ್ರೈಮಾಸಿಕ ಕಾರ್ಯಕ್ಷಮತೆಯನ್ನು ಘೋಷಿಸಿದೆ. ಡಿಸೆಂಬರ್ 2023 ರ ತ್ರೈಮಾಸಿಕದಲ್ಲಿ ಕಂಪನಿಯ ತ್ರೈಮಾಸಿಕ ನಿವ್ವಳ ಲಾಭವು ರೂ 68.78 ಕೋಟಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ರೂ 1.52 ಕೋಟಿ ಲಾಭ ಗಳಿಸಿದ್ದು, ಇದಕ್ಕೆ ಹೋಲಿಸಿದರೆ 4419.81% ಹೆಚ್ಚಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net