

ನವದೆಹಲಿ: ಸೂಪರ್ಸ್ಟಾರ್ ರಜನೀಕಾಂತ್ಗೆ ಇಂದು ನವದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ, ತಮ್ಮೊಳಗಿನ ನಟನನ್ನು ಗುರುತಿಸಿದ್ದಕ್ಕಾಗಿ, ಕರ್ನಾಟಕ ಸಾರಿಗೆ ಬಸ್ ಚಾಲಕರಾಗಿದ್ದ ತಮ್ಮ ಆಪ್ತ ಸ್ನೇಹಿತನನ್ನು ರಜನಿ ಸ್ಮರಿಸಿದರು.
2020ರ ಏಪ್ರಿಲ್ನಲ್ಲಿ ರಜನೀಕಾಂತ್ಗೆ 2019ನೇ ಸಾಲಿನ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿತ್ತು. ಕರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿಳಂಬವಾಗಿ ಇಂದು ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದರು. ಬಿಳಿಯ ಕುರ್ತಾ-ಪೈಜಾಮ ಧರಿಸಿ ಭಾಗವಹಿಸಿದ ರಜನಿಕಾಂತ್, ಪ್ರಶಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ, ತಮ್ಮೊಂದಿಗೆ ಸಿನಿಮಾ ಮಾಡಿದ ಎಲ್ಲಾ ನಿರ್ದೇಶಕರೂ, ನಿರ್ಮಾಪಕರು, ಚಿತ್ರತಂಡ ಮತ್ತು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
"ನನ್ನ ಮಾರ್ಗದರ್ಶಕ ಮತ್ತು ಗುರು ಕೆ.ಬಾಲಚಂದರ್ ಸರ್ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನಲ್ಲಿ ಉನ್ನತ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ತುಂಬಿದ ನನ್ನ ಸೋದರ ಸತ್ಯನಾರಾಯಣ ಗಾಯಕ್ವಾಡ್ ಅವರನ್ನು ನೆನೆಯುತ್ತೇನೆ. ಬಸ್ ಚಾಲಕನಾಗಿದ್ದ ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ ಬಹದೂರ್ಗೆ ನನ್ನ ಧನ್ಯವಾದ. ನಾನು ಬಸ್ ಕಂಡಕ್ಟರ್ ಆಗಿದ್ದಾಗ, ಅವನೇ ನನ್ನೊಳಗಿನ ನಟನನ್ನು ಗುರುತಿಸಿದ್ದು, ಸಿನಿಮಾ ಸೇರುವಂತೆ ಪ್ರೋತ್ಸಾಹಿಸಿದ್ದು..." ಎಂದು ರಜನೀಕಾಂತ್ ಹೇಳಿದರು.
ರಜನೀಕಾಂತ್ ಮಾಡಿದ ಮೊದಲ ಚಿತ್ರವೆಂದರೆ 1975 ರಲ್ಲಿ ಕೆ.ಬಾಲಚಂದರ್ ನಿರ್ದೇಶಿಸಿದ ಅಪೂರ್ವ ರಾಗಂಗಳ್. ನಾಲ್ಕು ದಶಕಗಳಿಂದ ತಮಿಳು ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಅವರು ಸುಮಾರು 160 ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನವೆಂಬರ್ 4 ರಂದು ಅವರ ನೂತನ ಚಿತ್ರ 'ಅಣ್ಣಾತ್ತೆ' ಬಿಡುಗಡೆಯಾಗಲಿದೆ. (ಏಜೆನ್ಸೀಸ್)