

ಆನಂದಪುರ: ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೋಗ ಮತ್ತು ಕೀಟ ಬಾಧೆ ನಿಯಂತ್ರಣ ಸಾಧ್ಯ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ ತಿಳಿಸಿದರು.
ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡಕೆ ಬೆಳೆಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಡಕೆ ಕೃಷಿ ಈಗ ಹೆಚ್ಚು ಸವಾಲು ಎದುರಿಸುತ್ತಿದೆ. ಅಡಕೆಗೆ ರೋಗಗಳು ತೀವ್ರವಾಗಿ ಹರಡಿಕೊಳ್ಳುತ್ತದೆ. ಅಡಕೆ ಸಸಿ ನಾಟಿಯಿಂದ ಮರವಾಗಿ ಬೆಳೆಸುವ ಪ್ರತಿ ಹಂತದಲ್ಲಿ ಸೂಕ್ತ ಔಷಧ ಸಿಂಪಡಣೆ ಅಗತ್ಯವಿದೆ. ರೋಗ ಪೀಡಿತ ಅಡಕೆ ಮರಗಳ ಬಗ್ಗೆ ಇನ್ನಷ್ಟು ನಿಗಾವಹಿಸಬೇಕು ಎಂದರು.
ಹೊಸ ಹೊಸ ಔಷಧಗಳು ತೀವ್ರ ಪರಿಣಾಮ ಉಂಟುಮಾಡಬಲ್ಲವು. ಇಂತಹ ಹೊಸ ಔಷಧಗಳ ಜ್ಞಾನ ರೈತರಿಗೆ ತಲುಪಿಸಬೇಕಾಗಿದೆ ಅಡಕೆ ಸಿಪ್ಪೆಯಿಂದ ಉತ್ತಮ ಸಾವಯವ ಗೊಬ್ಬರ ತಯಾರಿಸಬಹುದು ಎಂದು ತಿಳಿಸಿದರು.
ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಡಕೆ ಕೃಷಿ ವಿಶ್ವಮಟ್ಟದಲ್ಲಿ ಸ್ಪರ್ಧಿಸುವ ವ್ಯವಸ್ಥೆ ಸೃಷ್ಟಿಯಾಗಿದೆ. ಕೃಷಿಕರು ಹೆಚ್ಚು ಹೆಚ್ಚು ಬೆಳೆಯುವ ಬೆಳೆಗಳಲ್ಲಿ ಸೂಕ್ಷ್ಮರೋಗಗಳ ಸವಾಲು ಇರುತ್ತದೆ ಎಂದರು.
ಕೀಟಶಾಸ ವಿಭಾಗದ ಡಾ. ಶರಣಬಸಪ್ಪ, ಸಸ್ಯ ರೋಗ ಶಾಸಜ್ಞ ಡಾ. ನರಸಿಂಹಮೂರ್ತಿ, ಮಣ್ಣು ವಿಜ್ಞಾನ ವಿಭಾಗದ ಡಾ. ನಿರಂಜನ ತರಬೇತಿ ನೀಡಿದರು. ಸಂವಾದದಲ್ಲಿ 40ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.