

ಬಾಲಿವುಡ್ ನಟಿ ರಾಧಿಕಾ ಆಪ್ಟೆ 'ಬದ್ಲಾಪುರ್', 'ಅಂಧಾಧುನ್', 'ಫೋಬಿಯಾ' ಮುಂತಾದ ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಆದರೆ, ಕೆಲವೇ ವರ್ಷಗಳಿಂದ ಹಿಂದೆ, ರಾಧಿಕಾಗೆ ತಾನು ಚಿತ್ರರಂಗಕ್ಕೆ ಬರಬಹುದು, ಇಲ್ಲಿ ಹೆಸರು ಮಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲವಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಮೂಲತಃ ಪೂಣೆಯವಳು. ಅಲ್ಲೇ ಹಲವು ವರ್ಷಗಳ ಕಾಲ ಇದ್ದವಳು. ಚಿತ್ರಗಳಲ್ಲಿ ನಟಿಸಬೇಕು, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಸಹಜವಾಗಿಯೇ ಇತ್ತು. ಆದರೆ, ನಮ್ಮ ಊರಲ್ಲಿ ಮುಂಬೈ ಮತ್ತು ಚಿತ್ರರಂಗದ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯಗಳಿರಲಿಲ್ಲ' ಎಂದು ಹೇಳಿಕೊಂಡಿದ್ದಾರೆ.
'ನೀನು ಮುಂಬೈಗೆ ಹೋದರೆ ರೇಪ್ ಆಗ್ತೀಯಾ. ಸಿನಿಮಾರಂಗದಲ್ಲಿ ಆಗುವುದು ಅದೇ. ಹಾಗಾಗಿ ಅಲ್ಲಿಗೆ ಹೋಗಬೇಡ ಎಂದು ಜನ ಹೇಳುತ್ತಿದ್ದರು. ಅದಕ್ಕೆ ಕಾರಣ, ಚಿತ್ರರಂಗದ ಬಗ್ಗೆ ಅವರಿಗಿದ್ದ ಕಲ್ಪನೆ' ಎಂದು ರಾಧಿಕಾ ಹೇಳಿದ್ದಾರೆ.
ಇನ್ನು 'ಬದ್ಲಾಪುರ್' ಚಿತ್ರದ ನಂತರ ರಾಧಿಕಾಗೆ ಹೆಚ್ಚುಹೆಚ್ಚು ಸೆಕ್ಸ್ ಕಾಮಿಡಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. 'ಆ ಚಿತ್ರದಲ್ಲಿ ನಾನು ಅರೆನಗ್ನವಾಗಿ ಕಾಣಿಸಿಕೊಂಡೆ ಎಂಬ ಕಾರಣಕ್ಕೆ ನನಗೆ ಆ ತರಹದ ಪಾತ್ರಗಳೇ ಹೆಚ್ಚಾಗಿ ಸಿಗುತ್ತಾ ಹೋದವು. ನನಗೆ ಒಂದೇ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಬಂದ ಪಾತ್ರಗಳನ್ನೆಲ್ಲಾ ಬಿಡುತ್ತಾ ಹೋದೆ' ಎಂದು ರಾಧಿಕಾ ಆಪ್ಟೆ ಮಾತನಾಡಿದ್ದಾರೆ.