

ಬಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಗ್ಯಾಂಗ್ಗಳು, ಸ್ವಜನಪಕ್ಪಪಾತ, ಗ್ರೂಪಿಸಂ ... ವಿಪರೀತ ಹೆಚ್ಚಾಗುತ್ತಿದೆ ಎಂದು ಕಂಗನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಸರಿಯಾಗಿ, ತಮಗೂ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.
ರೆಹಮಾನ್ ಈ ವಿಷಯವನ್ನು ಹೇಳುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ಶೇಖರ್ ಕಪೂರ್, ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸೂಲ್ ಪೂಕ್ಕುಟ್ಟಿ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು 'ಆಸ್ಕರ್ ಶಾಪ' ಎಂದು ಹಿರಿಯ ನಿರ್ದೇಶಕ ಶೇಖರ್ ಕಪೂರ್ ಹೇಳಿದರೆ, ರೆಸೂಲ್ ಸಹ 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಸೌಂಡ್ ಡಿಸೈನ್ಗಾಗಿ ಆಸ್ಕರ್ ಪ್ರಶಸ್ತಿ ಬಂದ ನಂತರ, ಬಾಲಿವುಡ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿದ್ದರು.
ಈಗ ಇದೇ ವಿಷಯವಾಗಿ ಮಾತನಾಡಿರುವ ಅವರು, ಬಾಲಿವುಡ್ನಲ್ಲಿ ತಮಗೆ ಕೆಲಸ ಸಿಗದಿದ್ದರೂ, ಬಾಲಿವುಡ್ ಎಂದು ತಮ್ಮ ಬಗ್ಗೆ ನಿರ್ದಯವಾಗಿ ವರ್ತಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ನಿಜ ಹೇಳಬೇಕೆಂದರೆ, ನನಗೆ ಹಾರುವುದಕ್ಕೆ ರೆಕ್ಕೆ ಸಿಕ್ಕಿದ್ದೇ ಅಲ್ಲಿ. ಸೌಂಡ್ ಡಿಸೈನರ್ ಆಗಿ ನನ್ನ ಆರಂಭದ ಪ್ರಯೋಗಗಳು ಶುರುವಾಗಿದ್ದು ಬಾಲಿವುಡ್ನಲ್ಲೇ. ಕೆಲವು ಸೂಕ್ಷ್ಮ ಸಂವೇದನೆಯ ನಟರು ನನಗೆ ಬಹಳ ಪ್ರೋತ್ಸಾಹ ನೀಡಿದರು. ಶಾರೂಖ್ ಖಾನ್, ಅಮೀರ್ ಖಾನ್ ಮುಂತಾದವರು ಚಿತ್ರಗಳನ್ನು ಕೊಟ್ಟರು. ನನಗೆ ಪ್ರಶಸ್ತಿ ಸಿಕ್ಕ ನಂತರ ಅವಕಾಶಗಳು ಕಡಿಮೆಯಾದವು. ಆ ನಂತರ ನಾನು ಬೇರೆ ಬೇರೆ ಭಾಷಯೆ ಚಿತ್ರಗಳಿಗೆ ಸೌಂಡ್ ಡಿಸೈನ್ ಮಾಡುವ ಮೂಲಕ ಬ್ಯುಸಿಯಾದೆ. ಈಗ ಅದನ್ನೆಲ್ಲಾ ದಾಟಿ ಬಹಳ ದೂರ ಬಂದಿದ್ದೇನೆ. ಆಸ್ಕರ್ ಶಾಪ ಮುಗಿಯಿತು. ನಾವು ಸಹ ಲೈಫ್ನಲ್ಲಿ ಬಹಳಷ್ಟು ಮುಂದೆ ಹೋಗಿದ್ದೇವೆ' ಎಂದು ರೆಸೂಲ್ ಹೇಳಿಕೊಂಡಿದ್ದಾರೆ.
ಇನ್ನು ರೆಹಮಾನ್ ಬಗ್ಗೆ ಮಾತನಾಡಿರುವ ಅವರು, 'ರೆಹಮಾನ್ ಹೇಳಿರುವ ಗ್ಯಾಂಗ್ಗಳ್ಯಾವುವೂ ನನಗೆ ಗೊತ್ತಿಲ್ಲ. ಅವರು ಹಾಗೆ ಹೇಳಿದ್ದಾರೆ ಎಂದರೆ, ಅವರಿಗೆ ಆ ರೀತಿ ಅನಿಸಿರಬಹುದು. ಇಷ್ಟಕ್ಕೂ ರೆಹಮಾನ್ ಇಂಥಾ ಚಿಲ್ಲರೆ ರಾಜಕೀಯವನ್ನೆಲ್ಲಾ ಮೀರಿ ಬೆಳೆದಿದ್ದಾರೆ. ಅವರೊಬ್ಬ ಗ್ಲೋಬಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ' ಎಂದು ರೆಸೂಲ್ ಅಭಿಪ್ರಾಯಪಟ್ಟಿದ್ದಾರೆ.