

ಬೆಂಗಳೂರು: ಒಂದೇ ವಾರದೊಳಗೆ ಅದೆಷ್ಟೋ ಮಂದಿ ವಾಟ್ಸ್ಆ್ಯಪ್ಗೆ ಬೈಯುವ ಜತೆಗೆ ಬಾಯ್ ಹೇಳಲೂ ಆರಂಭಿಸಿದ್ದಾರೆ. ಮಾತ್ರವಲ್ಲ, ಟೆಲಿಗ್ರಾಮ್ಗೆ ಹಾಯ್ ಹೇಳಲು ಹಾಗೂ ಸಿಗ್ನಲ್ ಕೊಡಲು ಮುಂದಾಗಿದ್ದಾರೆ. ಅರ್ಥಾತ್ ವಾಟ್ಸ್ಆ್ಯಪ್ ಬದಲಿಗೆ ಹಲವರು ಟೆಲಿಗ್ರಾಮ್ ಡೌನ್ಲೋಡ್ ಮಾಡಿಕೊಂಡು ಬಳಸಲಾರಂಭಿಸಿದ್ದರೆ ಇನ್ನು ಕೆಲವರು 'ಸಿಗ್ನಲ್' ಆ್ಯಪ್ ಬಳಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟಕ್ಕೂ ಹೀಗಾಗಿದ್ದೇಕೆ ಎಂದರೆ, ಇದು ವಾಟ್ಸ್ಆ್ಯಪ್ನ ಸ್ವಯಂಕೃತ ಅಪರಾಧ. ಅಂದರೆ, ಇತ್ತೀಚೆಗಷ್ಟೇ ವಾಟ್ಸ್ಆ್ಯಪ್ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದು, ಇದರ ಬಗ್ಗೆ ಅಸಮಾಧಾನಗೊಂಡಿರುವ ಬಳಕೆದಾರರು ಈ ಬದಲಾವಣೆಗೆ ಮುಂದಾಗಿದ್ದಾರೆ. ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರಲಿದೆ ಎಂಬ ಹಿನ್ನೆಲೆಯಲ್ಲಿ ಹಾಗೂ ವೈಯಕ್ತಿಕ ಮಾಹಿತಿಗಳು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಈಗಾಗಲೇ ಹಲವಾರು ಬಳಕೆದಾರರು ವಾಟ್ಸ್ಆ್ಯಪ್ನಿಂದ ವಿಮುಖರಾಗಿ ಟೆಲಿಗ್ರಾಮ್ನತ್ತ ಮುಖ ಮಾಡಿದ್ದಾರೆ.
ಫೇಸ್ಬುಕ್ ಮಾಲೀಕತ್ವದಲ್ಲಿರುವ ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿ ಫೆಬ್ರವರಿ 8ರಿಂದ ಅನ್ವಯಿಸಲಿದೆ. ಹೊಸ ಪಾಲಿಸಿಯಿಂದ ಫೇಸ್ಬುಕ್ ಸಂಸ್ಥೆಗೆ ವಾಟ್ಸ್ಆ್ಯಪ್ ಡಾಟಾ ಮೇಲೆ ಕಣ್ಣು ಹಾಕಲು ಅನುಕೂಲವಾಗಲಿದೆ ಎನ್ನಲಾಗಿದೆ. ಅಲ್ಲದೆ ಫೇಸ್ಬುಕ್ ಈ ಹಿಂದೆಯೇ ಡೇಟಾ ಕಳವು ಆರೋಪ ಎದುರಿಸಿರುವುದರಿಂದ ಈಗ ಬಳಕೆದಾರರಲ್ಲಿ ಈ ಅಭದ್ರತೆ ಕಾಡಲಾರಂಭಿಸಿದೆ. ಇನ್ನು ಫೆಬ್ರವರಿ 8ರ ಬಳಿಕ ವಾಟ್ಸ್ಆ್ಯಪ್ ಬಳಸಬೇಕಿದ್ದರೆ ಬಳಕೆದಾರರು ಈಗಿನ ಹೊಸ ಪ್ರೈವೆಸಿ ಪಾಲಿಸಿಯನ್ನು ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯ.
ಹೀಗಾಗಿ ಬಹಳಷ್ಟು ಮಂದಿ ವಾಟ್ಸ್ಆ್ಯಪ್ ಡಿಲೀಟ್ ಮಾಡಿ ಟೆಲಿಗ್ರಾಮ್ ಹಾಗೂ ಸಿಗ್ನಲ್ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಮಾತ್ರವಲ್ಲ ವಾಟ್ಸ್ಆ್ಯಪ್ ಹೊಸ ಪ್ರೈವೆಸಿ ಪಾಲಿಸಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನು ಕೆಲವರು ವಾಟ್ಸ್ಆ್ಯಪ್ಗಿಂತಲೂ ಟೆಲಿಗ್ರಾಮ್ ಹೇಗೆ ವಿಶೇಷ ಹಾಗೂ ಉತ್ತಮ ಮತ್ತು ಅದರಲ್ಲಿರುವ ಫೀಚರ್ಸ್ ತಾಳೆ ಹಾಕಿ ಟೆಲಿಗ್ರಾಮ್ ಬಳಸುವುದು ಉತ್ತಮ ಎಂದು ಸಾರಲಾರಂಭಿಸಿದ್ದಾರೆ. (ಏಜೆನ್ಸೀಸ್)