

ಬೋಲ್ಪುರ: ಬಾಂಗ್ಲಾದೇಶೀಯರ ಅಕ್ರಮ ವಲಸೆ ಮತ್ತು ಕಾಟ, ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ ಮುಂತಾದವುಗಳಿಂದ ಬೇಸತ್ತಿರುವ ಬಂಗಾಳ ಬದಲಾವಣೆಯನ್ನು ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ಅವರು ಭಾನುವಾರ ಭಿರ್ಬೂಮ್ ಜಿಲ್ಲೆಯ ಬೋಲ್ಪುರದಲ್ಲಿ ರೋಡ್ ಷೋ ಒಂದರಲ್ಲಿ ಭಾಗವಹಿಸಿ ಮಾತನಾಡಿದರು.
ಪಶ್ಚಿಮ ಬಂಗಾಳಕ್ಕೆ ಸೋನರ್ ಬಾಂಗ್ಲಾ ಎಂಬ ಹೆಸರೊಂದಿದೆ. ಬಂಗಾಳದ ಹಳೆಯ ವೈಭವವನ್ನು ಮತ್ತೆ ಒದಗಿಸುವ ಕೆಲಸವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಡಲಿದೆ. ನಾನು ಅನೇಕ ರೋಡ್ ಷೋಗಳಲ್ಲಿ ಭಾಗವಹಿಸಿದ್ದೇನೆ. ಆಯೋಜಿಸಿದ್ದೇನೆ. ಆದರೆ, ಇಂಥ ರೋಡ್ ಷೋವನ್ನು ನೋಡಿರಲಿಲ್ಲ. ಇದು ಮಮತಾ ಬ್ಯಾನರ್ಜಿ ಅವರ ಸರ್ಕಾರದ ವಿರುದ್ಧದ ಆಕ್ರೋಶವಾಗಿದ್ದು, ರೋಡ್ ಷೋ ಮೂಲಕ ಅದು ವ್ಯಕ್ತವಾಗುತ್ತಿದೆ. ಇಲ್ಲಿ ಸೇರಿರುವ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಕೂಡ ಹೌದು ಎಂದು ಷಾ ವ್ಯಾಖ್ಯಾನಿಸಿದರು.
ಕವಿ ರವೀಂದ್ರನಾಥ ಟಾಗೋರ್ ಅವರೊಂದಿಗೆ ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ನಂಟು ಹೊಂದಿರುವ ಬೋಲ್ಪುರದಲ್ಲಿ ರೋಡ್ ಷೋ ನಡೆಸುವ ಮುನ್ನ ಟಾಗೋರ್ ಅವರಿಗೆ ಅಮಿತ್ ಷಾ ಪುಷ್ಪನಮನ ಸಲ್ಲಿಸಿದರು. ಬೋಲ್ಪುರದ ಡಾಕ್ಬಂಗ್ಲೋ ಗ್ರೌಂಡ್ನಿಂದ ಅಪರಾಹ್ನ 3.10ಕ್ಕೆ ಶುರುವಾದ ರೋಡ್ ಷೋ ಚೌರಾಸ್ತಾ ತನಕವೂ ಮುಂದುವರಿಯಿತು. ತೆರೆದ ಲಾರಿಯ ಮೇಲೆ ಅಮಿತ್ ಷಾ ಅವರೊಂದಿಗೆ ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಕೂಡ ಜತೆಗಿದ್ದರು. ಬೆಂಬಲಿಗರು ಜೈಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್, ಅಮಿತ್ ಷಾ ಜಿಂದಾಬಾದ್ ಘೋಷಣೆ ಕೂಗಿದರು. (ಏಜೆನ್ಸೀಸ್)