

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟ 25ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಹೋರಾಟಗಾರರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು, ಹೋರಾಟ ನಿರತ ಗುಂಪುಗಳಲ್ಲಿ ಒಂದು ಗುಂಪಿಗೆ ವಿದೇಶಗಳಿಂದ ಹಣ ಬರುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ನೋಟಿಸ್ ನೀಡಿರುವುದಾಗಿಯೂ ತಿಳಿಸಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್ಗೆ ವಿದೇಶದಿಂದ ಹಣ ಬರುತ್ತಿರುವುದಾಗಿ ಹೇಳಲಾಗಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ಪಂಜಾಬ್ ಮತ್ತು ಮೊಘಾ ಜಿಲ್ಲೆಯ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಅಧಿಕಾರಿಗಳಿಗೆ ಮಿಂಚಂಚಿ ಕಳುಹಿಸಿದೆ. ಕಳೆದ ಎರಡು ತಿಂಗಳಲ್ಲಿ 8ರಿಂದ 9 ಲಕ್ಷ ಹಣ ವರ್ಗಾವಣೆ ಆಗಿದೆ. ವಿದೇಶಿ ವಿನಿಮಯದ ಬಗ್ಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಬ್ಯಾಂಕಿನ ಅಧಿಕಾರಿಗಳು ರೈತ ಸಂಘಟನೆಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.
ವಿದೇಶಗಳಲ್ಲಿರುವ ಪಂಜಾಬಿಗಳು ರೈತ ಹೋರಾಟಕ್ಕೆ ಬೆಂಬಲ ತೋರುವ ನಿಟ್ಟಿನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಕಲಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈ ರೀತಿಯ ಉಪಾಯಗಳನ್ನು ಮಾಡುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದೂರಿದ್ದಾರೆ. (ಏಜೆನ್ಸೀಸ್)