ಫೇಸ್​​ಮಾಸ್ಕ್​ಗಳಿಲ್ಲದೆ ಮನೆಯಿಂದ ಹೊರ ಬರ್ತಿಲ್ಲ ಚೀನಾ ಜನತೆ! ಕರೊನಾ ತವರಲ್ಲಿ ಬಿಸಿಲಿನ ಆರ್ಭಟ

China Facemask
Published on

ಬೀಜಿಂಗ್​: ಭಾರತದಲ್ಲಿ ಮಳೆರಾಯ ನಿತ್ಯವೂ ಅಬ್ಬರಿಸುತ್ತಿದ್ದರೆ ಪಕ್ಕದ ಚೀನಾದಲ್ಲಿ ಬಿಸಿಲ ತಾಪಕ್ಕೆ ಜನ ಬಳಲುತ್ತಿದ್ದಾರೆ. ಬಿಸಿಗಾಳಿಗೆ ತತ್ತರಿಸಿರುವ ಚೀನಾ ಜನತೆ ಇದೀಗ ಫೇಸ್​ ಮಾಸ್ಕ್ ಅಥವಾ ಫೇಸ್​ಕಿನಿಸ್​​​ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಅಲ್ಲಿ ಫೇಸ್​ಮಾಸ್ಕ್​ಗೆ​ ಭಾರೀ ಬೇಡಿಕೆ ಬಂದಿದೆ.

ಚೀನಾದಲ್ಲಿ ಅತ್ಯಧಿಕ ತಾಪಮಾನ 

ಕಣ್ಣು ಮತ್ತು ಮೂಗು ಎರಡನ್ನು ಬಿಟ್ಟು ಸಂಪೂರ್ಣ ಮುಚ್ಚಿಕೊಳ್ಳುವ ಫೇಸ್​ ಮಾಸ್ಕ್​ಗೆ ಎಲ್ಲಿಲ್ಲದ ಬೇಡಿಕೆ ಚೀನಾದಲ್ಲಿ ಬಂದಿದೆ. ಎಲ್ಲೆಂದರಲ್ಲಿ ಜನರು ಈ ಫೇಸ್​ಮಾಸ್ಕ್​ ಹಾಕ್ಕೊಂಡು ಓಡಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಫ್ಯಾಶನ್​ ಪರಿಕರವಾಗಿಬಿಟ್ಟಿದೆ. ಇದೇ ಮೊದಲಿಗೆ ಚೀನಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತಾಪಮಾನ ಹೆಚ್ಚಾಗಿದ್ದು, ಬಿಸಿಲೇಟಿನಿಂದ ಮುಖವನ್ನು ರಕ್ಷಣೆ ಮಾಡಿಕೊಳ್ಳಲು ಎಲ್ಲರು ಫೇಸ್​ಮಾಸ್ಕ್​ ಬಳಸುತ್ತಿದ್ದಾರೆ. ಹೀಗಾಗಿ ಅಲ್ಲಿ ಫೇಸ್​ಮಾಸ್ಕ್​ಗೆ ಭಾರೀ ಬೇಡಿಕೆ ಬಂದಿದೆ.

ಸಿಂಥೆಟಿಕ್​ ಫ್ಯಾಬ್ರಿಕ್​ ತಯಾರು 

ಸೂರ್ಯನು ಹೊರಸೂಸುವ ನೇರಳಾತೀತ ವಿಕಿರಣಗಳಿಂದ ಸನ್​ಬರ್ನ್ಸ್​​ ಮತ್ತು ಚರ್ಮ ಕ್ಯಾನ್ಸರ್​ ಸಂಭವಿಸುವ ಸಾಧ್ಯತೆ ಇರುವುದರಿಂದ ಅದರಿಂದ ರಕ್ಷಣೆ ಮಾಡಿಕೊಳ್ಳಲು ಚೀನಾ ಜನತೆ ಫೇಸ್​ಮಾಸ್ಕ್​ ದಾರಿಯನ್ನು ಕಂಡುಕೊಂಡಿದ್ದಾರೆ. ಅಂದಹಾಗೆ ಈ ಫೇಸ್​ಕಿನಿಸ್​ ಅಥವಾ ಫೇಸ್​ಮಾಸ್ಕ್​ ಅನ್ನು ಪಾಲಿಸ್ಟರ್‌ನಂತಹ ಹಗುರವಾದ, ಸಿಂಥೆಟಿಕ್​ ಫ್ಯಾಬ್ರಿಕ್​ನಿಂದ ಮಾಡಲಾಗುತ್ತದೆ.

ಫ್ಯಾನ್ಸ್​ ಜೋಡಣೆಯ ಟೋಪಿ 

ಚೀನಾದ ಕೆಲವು ಭಾಗಗಳಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್​ವರೆಗೂ ಏರಿದ್ದು, ಅಲ್ಲಿನ ನಿವಾಸಿಗಳು ಮತ್ತು ಪ್ರವಾಸಿಗರು ತಮ್ಮ ಪ್ರಯಾಣದ ವೇಳೆ ಸಾಗಿಬಹುದಾದ ಫ್ಯಾನ್ಸ್​ ಮತ್ತು ಫೇಸ್​ಮಾಸ್ಕ್​ಗಳನ್ನು ಜತೆಗೆ ಕೊಂಡೊಯ್ಯುತ್ತಿದ್ದಾರೆ. ಅದರಲ್ಲೂ ಫ್ಯಾನ್ಸ್​ ಜೋಡಣೆಯಿಂದ ಮಾಡಿರುವ ಟೋಪಿಗಳನ್ನು ಸಹ ಸಾಮಾನ್ಯವಾಗಿ ಧರಿಸುತ್ತಿದ್ದಾರೆ.

ಮಾರಾಟ ವೃದ್ಧಿ

ವಾಂಗ್​ ಎಂಬ ಸರ್​ನೇಮ್​ ಹೊಂದಿರುವ ವ್ಯಕ್ತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕರೊನಾ ಸಾಂಕ್ರಮಿಕಗೂ ಮುಂಚೆ ಹೋಲಿಕೆ ಮಾಡಿದರೆ ಈ ವರ್ಷ ಮಾರಾಟದಲ್ಲಿ ಸುಧಾರಣೆ ಕಂಡಿದೆ. ಈ ವರ್ಷ ಮತ್ತಷ್ಟು ಮಾರಾಟ ವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಪೂರ್ವ ಏಷ್ಯಾದ ಅನೇಕ ಮಹಿಳಾ ಗ್ರಾಹಕರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಒಲವು ತೋರುತ್ತಾರೆ ಮತ್ತು ದಕ್ಷಿಣ ಕೊರಿಯಾದಂತಹ ನೆರೆಯ ರಾಷ್ಟ್ರಗಳಲ್ಲಿ ಸೂರ್ಯನ ರಕ್ಷಣೆಯ ಉತ್ಪನ್ನಗಳು ಜನಪ್ರಿಯವಾಗಿವೆ. ಬೀಜಿಂಗ್‌ನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತನ್ನ ತಾಯಿಯ ಜತೆ ಫೇಸ್​ಮಾಸ್ಕ್​ ಧರಿಸಿದ್ದ 17 ವರ್ಷದ ವಿದ್ಯಾರ್ಥಿ ಲಿ ಕ್ಸುಯಾನ್ ಮಾತನಾಡಿ, ನನಗೆ ಇರುವ ಮುಖ್ಯ ಕಾಳಜಿ ಅಂದರೆ ಸಂಭಾವ್ಯ ಚರ್ಮ ರೋಗಗಳು ಅಥವಾ ಸೂರ್ಯನ ಕಲೆಗಳು ಬರದಂತೆ ನೋಡಿಕೊಳ್ಳುವುದು ಎಂದಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net