More

    ಫೇಸ್​ಬುಕ್​ ಫ್ರೆಂಡ್​ಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಅಸಲಿ ಕತೆ ಬಿಚ್ಚಿಟ್ಟ ತಂದೆ ಥಾಮಸ್​!

    ನವದೆಹಲಿ: ಪಬ್​ಜಿ ಲವರ್​ಗಾಗಿ ಪಾಕಿಸ್ತಾನದ ಸೀಮಾ ಹೈದರ್​ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಘಟನೆ ಇಡೀ ರಾಷ್ಟ್ರದಲ್ಲಿ ಭಾರೀ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಭಾರತ ಮೂಲದ ಮಹಿಳೆಯೊಬ್ಬಳು ತನ್ನ ಫೇಸ್​ಬುಕ್​ ಫ್ರೆಂಡ್​ ಭೇಟಿಯಾಗಲು ಅಧಿಕೃತ ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಹೋಗಿರುವ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ತಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಆಕೆ ಮಾನಸಿಕ ಅಸ್ವಸ್ಥೆ ಮತ್ತು ವಿಚಿತ್ರ ಸ್ವಭಾವದ ಹುಡುಗಿ ಎಂದಿದ್ದಾರೆ. ಅಲ್ಲದೆ, ಆಕೆಗೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ.

    ಯಾರು ಈ ಅಂಜು?

    ಪಾಕಿಸ್ತಾನಕ್ಕೆ ತೆರಳಿರುವ ಮಹಿಳೆ ಹೆಸರು ಅಂಜು (34). ಈಕೆ ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿ, ಇದೀಗ ಅಂಜು ಪ್ರಿಯಕರನನ್ನು ಅರಸಿ ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲಾನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಾಳೆ.

    ಇದನ್ನೂ ಓದಿ: ಬರಿದಾಗಿದ್ದ KRS​ ಡ್ಯಾಂನಲ್ಲಿ ಮತ್ತೆ ಜೀವಕಳೆ: 100 ಅಡಿ ತಲುಪಿದ ನೀರಿನ ಮಟ್ಟ, ರೈತರ ಮುಖದಲ್ಲಿ ಸಂತಸ

    ಆಕೆ ಸಂಪರ್ಕದಲ್ಲಿಲ್ಲ 

    ಈ ಬಗ್ಗೆ ಮಾತನಾಡಿರುವ ಅಂಜು ತಂದೆ ಗಯಾ ಪ್ರಸಾದ್ ಥಾಮಸ್, ಅಂಜು ಪಾಕಿಸ್ತಾನದಲ್ಲಿ ಇರುವ ಸಂಗತಿ ನನಗೆ ನಿನ್ನೆಯಷ್ಟೇ ತಿಳಿಯಿತು. ಅಕ್ಕ ಪಾಕಿಸ್ತಾನಕ್ಕೆ ಹೋದಳು ಎಂದು ನನ್ನ ಮಗ ಹೇಳಿದನು. ಆದರೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಆಕೆ ಮದುವೆಯಾಗಿ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿರುವ ಭಿವಾಡಿಗೆ ಸ್ಥಳಾಂತರವಾದ ಬಳಿಕ ಸುಮಾರು 20 ವರ್ಷಗಳಿಂದ ನಾನು ಆಕೆಯ ಸಂಪರ್ಕದಲ್ಲಿಲ್ಲ ಎಂದು ತಿಳಿಸಿದ್ದಾರೆ.

    ಇಬ್ಬರು ಮಕ್ಕಳಿದ್ದಾರೆ

    ಆಕೆಯನ್ನು ನಾವೆಂದಿಗೂ ಮನೆಗೆ ಆಹ್ವಾನಿಸಿರಲಿಲ್ಲ. ಏಕೆಂದರೆ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಥಾಮಸ್ ಹೇಳಿದ್ದಾರೆ. ಅಂದಹಾಗೆ ಥಾಮಸ್​ ಅವರು ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲೆಯ ತೆಂಕನಾಪುರ್​ ಪಟ್ಟಣದ ಬೌನಾ ಗ್ರಾಮದಲ್ಲಿ ವಾಸವಿದ್ದಾರೆ. ಅಂಜು 3ನೇ ವಯಸ್ಸಿನಿಂದಲೇ ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದಳು. ಆಕೆ ಹುಟ್ಟಿದ್ದು ಕೂಡ ಅಲ್ಲಿಯೇ. ಮದುವೆ ಸಹ ಅಲ್ಲಿಯೇ ನಡೆಯಿತು. ಯಾರಿಗೂ ಮಾಹಿತಿ ನೀಡದೆ ಆಕೆ ಪಾಕಿಸ್ತಾನಕ್ಕೆ ಹೋಗಿದ್ದು ತಪ್ಪು. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳು ಈಗ ಅವರ ತಂದೆಯ ಜತೆಗಿದ್ದಾರೆ. ಆಕೆ ಯಾವಾಗ ಪಾಕಿಸ್ತಾನಕ್ಕೆ ಹೋದಳು ಎಂಬ ಐಡಿಯಾವೂ ನನಗಿಲ್ಲ ಎಂದು ಹೇಳಿದರು.

    ವಿಲಕ್ಷಣ ಸ್ವಭಾವದಿಂದಾಗಿ ತೊರೆದಿದ್ದೇನೆ 

    ನನ್ನ ಅಳಿಯ ತುಂಬಾ ಸರಳ ವ್ಯಕ್ತಿ. ನನ್ನ ಮಗಳು ವಿಚಿತ್ರ ಸ್ವಭಾವದವಳು. ಆದರೆ, ಆಕೆ ತನ್ನ ಸ್ನೇಹಿತನೊಂದಿಗೆ ಯಾವುದೇ ಸಂಬಂಧವನ್ನು ಆಕೆ ಹೊಂದಿಲ್ಲ. ಅವಳು ಸ್ವತಂತ್ರ ಸ್ವಭಾವದವಳು, ಆದರೆ ಅವಳು ಎಂದಿಗೂ ಈ ರೀತಿಯ ಪ್ರಯತ್ನ ಮಾಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸಬಲ್ಲೆ. ಆಕೆ 12ನೇ ತರಗತಿಯವರೆಗೆ ಓದಿದ್ದಾಳೆ ಮತ್ತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮಗಳ ವಿಲಕ್ಷಣ ಸ್ವಭಾವದಿಂದಾಗಿ ನಾನು ಅವಳನ್ನು ತೊರೆದಿದ್ದೇನೆ ಎಂದು ಥಾಮಸ್​ ಹೇಳಿದರು.

    ಇದನ್ನೂ ಓದಿ: ಅರೆಬರೆ ಡ್ರೆಸ್​ ಬಗ್ಗೆ ವ್ಯಕ್ತಿಯೊಬ್ಬ ಆಡಿದ ಮಾತು ಕೇಳಿ ಕೆರಳಿದ ಉರ್ಫಿ: ಮುಂಬೈ ಏರ್ಪೋರ್ಟ್​ನಲ್ಲಿ ಹೈಡ್ರಾಮ!

    ಅಧಿಕೃತ ವೀಸಾದಲ್ಲಿ ಪಾಕ್​ಗೆ ಪಯಣ

    ಸದ್ಯಕ್ಕೆ ಅಂಜು ಪಾಕಿಸ್ತಾನದಲ್ಲಿ ಇರುವುದು ಮಾಧ್ಯಮ ವರದಿಗಳು ಮೂಲಕ ತಿಳಿದುಬಂದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂಜು ಅವರು ಅಧಿಕೃತ ವೀಸಾದಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದಾರೆ ಮತ್ತು ವರ್ಷಗಳ ಹಿಂದೆಯೇ ಈ ಏರಿಯಾವನ್ನು ಆಕೆ ತೊರೆದಿರುವುದಾಗಿ ನಾವು ಕೇಳಿದ್ದೇವೆ ಎಂದು ದಾಬ್ರಾದ ಉಪವಿಭಾಗದ ಪೊಲೀಸ್ ಅಧಿಕಾರಿ ವಿವೇಕ್ ಕುಮಾರ್ ಶರ್ಮಾ ಹೇಳಿದರು.

    ನಮ್ಮಿಬ್ಬರ ನಡುವೆ ಪ್ರೀತಿ ಇಲ್ಲ

    ಅಂಜುವಿನ ವೀಸಾ ಅವಧಿ ಮುಗಿದ ನಂತರ ಆಕೆ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ ಎಂದು ಆಕೆಯ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಸೋಮವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ನಡುವೆ ನಡುವೆ ಯಾವುದೇ ಪ್ರೇಮ ಸಂಬಂಧ ಇಲ್ಲ ಎನ್ನುವ ಮೂಲಕ ಪ್ರೇಮ ಪ್ರಕರಣ ಸಂಬಂಧದ ವರದಿಗಳನ್ನು ತಳ್ಳಿಹಾಕಿದ್ದಾರೆ ಮತ್ತು ಅಂಜುವನ್ನು ಮದುವೆ ಆಗುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.

    30 ದಿನಗಳವರೆಗೆ ಮಾತ್ರ ವೀಸಾ ಮಾನ್ಯತೆ

    ಪೇಶಾವರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಅಪ್ಪರ್ ದಿರ್ ಜಿಲ್ಲೆಯ ಕುಲ್ಶೋ ಗ್ರಾಮದಿಂದ ಫೋನ್ ಮೂಲಕ ಪಾಕಿಸ್ತಾನ ಪಿಟಿಐಗೆ ನಸ್ರುಲ್ಲ ಮಾಹಿತಿ ನೀಡಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಪ್ಪರ್​ ದಿರ್‌ಗೆ ಮಾತ್ರ ಮಾನ್ಯವಾಗಿರುವ 30 ದಿನಗಳ ವೀಸಾವನ್ನು ಅಂಜುಗೆ ನೀಡಲು ನಿರ್ಧರಿಸಲಾಗಿದೆ ಎಂದು ಚಾನ್ಸರಿಗೆ ತಿಳಿಸಲಾಗಿದೆ.

    ಇದನ್ನೂ ಓದಿ: ಲೋಕಾಯುಕ್ತ ಪೊಲೀಸರು​ ದಾಳಿ ಮಾಡ್ತಿದ್ದಂತೆ 5 ಸಾವಿರ ರೂ. ಲಂಚದ ಹಣ ನುಂಗಿದ ಕಂದಾಯ ಅಧಿಕಾರಿ!

    ಆಗಸ್ಟ್​ 20ಕ್ಕೆ ಭಾರತಕ್ಕೆ

    ನಸ್ರುಲ್ಲ ವಿಚಾರಕ್ಕೆ ಬರುವುದಾದರೆ, ವಿಜ್ಞಾನ ಪದವೀಧರರಾಗಿರುವ ನಸ್ರುಲ್ಲಾ, ಐವರು ಸಹೋದರರಲ್ಲಿ ಕಿರಿಯವರಾಗಿದ್ದಾರೆ. ತಮ್ಮ ಸ್ನೇಹಕ್ಕೆ ಯಾವುದೇ ಪ್ರೀತಿಯ ಆಯಾಮವಿಲ್ಲ ಎಂದು ಸ್ಥಳೀಯ ಅಧಿಕಾರಿಗಳಿಗೆ ನಸ್ರುಲ್ಲ ಅಫಿಡವಿಟ್ ನೀಡಿದ್ದು, ಆಗಸ್ಟ್ 20ರಂದು ಅಂಜು ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ. ಅಪ್ಪರ್​ ದೀರ್​ ಜಿಲ್ಲೆಯಿಂದ ಹೊರಗೆಲ್ಲೂ ಆಕೆ ಹೋಗಿಲ್ಲ ಎಂದು ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ. ಅಂಜು ವೀಸಾ ದಾಖಲೆಗಳ ಪ್ರಕಾರ ಅವಳು ಖಂಡಿತವಾಗಿಯೂ ಆಗಸ್ಟ್ 20 ರಂದು ಹಿಂತಿರುಗುತ್ತಾಳೆ ಎಂದು ಅಪ್ಪರ್ ದಿರ್ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಮುಷ್ತಾಕ್ ಖಾನ್ ಹೇಳಿದ್ದಾರೆ. (ಏಜೆನ್ಸೀಸ್​)

    ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ನಿಶಾಳ ಬ್ಯಾಂಕ್​ ಖಾತೆಯನ್ನು ನೋಡಿ ಪೊಲೀಸರೇ ದಂಗು!

    ಬೆಳ್ಳಂಬೆಳಗ್ಗೆಯೇ ತಂದೆಯ ಜತೆ ಕೃಷಿ ಹೊಂಡದಲ್ಲಿ ಈಜಲು ಹೋದ ಯುವತಿ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts