

ಚಿತ್ರದುರ್ಗ: ದುರಂತ ಅಂತ್ಯ ಕಂಡ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಅವರ ಸ್ವಗ್ರಾಮ ದೊಡ್ಡಸಿದ್ದವ್ವನಹಳ್ಳಿಯ ಬಹುತೇಕರು ಅವರ ಪುತ್ರ ಬಾಬುರೆಡ್ಡಿ(ಎನ್.ಜೆ.ಕೃಷ್ಣ)ಅವರನ್ನು ಹೊರತುಪಡಿಸಿ ಉಳಿದವರನ್ನು ನೋಡಿರಲಿಲ್ಲವಂತೆ.
ಸಂಬಂಧಿಕರು ಕೃಷ್ಣ ಅವರನ್ನು ಬಾಬುರೆಡ್ಡಿ ಎಂದೇ ಕರೆಯುತ್ತಿದ್ದರು. ಅವರ ಹೆಸರು ಕೃಷ್ಣ ಎಂದೇ ಗೊತ್ತಾಗಿದ್ದೇ ಈ ಪ್ರಕರಣ ಬಹಿರಂಗವಾದ ಬಳಿಕ ಎನ್ನುತ್ತಾರೆ ಗ್ರಾಮಸ್ಥರು. ಸಂಬಂಧಿಕರ ಪೈಕಿ ಕೆಲವರು ಚಿತ್ರದುರ್ಗದಲ್ಲಿದ್ದ ಜಗನ್ನಾಥರೆಡ್ಡಿ ಮನೆಗೆ ಹೋಗಿ ಬರುತ್ತಿದ್ದರಾದರೂ ಅದು ಕೂಡ ಏಳೆಂಟು ವರ್ಷಗಳ ಹಿಂದೆ! ಯಾವಾಗ ಮನೆಗೆ ಹೋದವರಿಗೆ ಸ್ಪಂದನೆ ಸಿಗಲಿಲ್ಲವೋ ಅಲ್ಲಿಂದ ಒಬ್ಬೊಬ್ಬರಾಗಿ ಜಗನ್ನಾಥ ರೆಡ್ಡಿ ಕುಟುಂಬದಿಂದ ದೂರ ಉಳಿಯಲಾರಂಭಿಸಿದರು.
ಯಾರಾದರೂ ಸಿಕ್ಕಾಗ ಬಾಬುರೆಡ್ಡಿ ನಾವು ಬೆಂಗಳೂರಲ್ಲಿರುತ್ತೇವೆ ಎನ್ನುತ್ತಿದ್ದರಂತೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಹಾಜರಾದರೆ ಅದು ಬಾಬುರೆಡ್ಡಿ ಮಾತ್ರ ಎನ್ನಲಾಗಿದೆ. ಇವರ ಮನೆ ಬಳಿ ಕಲ್ಯಾಣ ಮಂಟಪವಿದೆ. ಅಲ್ಲಿ ನಡೆದ ಬಂಧುಗಳ ಮದುವೆಗೂ ಇವರ್ಯಾರು ಹಾಜರಾಗುತ್ತಿರಲಿಲ್ಲ. ಸಮಾಜದಿಂದ ದೂರವುಳಿಯುತ್ತ ಹೋದ ಇವರ ನಡೆ ಸಂಬಂಧಿಕರಿಗೂ ಬೇಸರ ತರಿಸಿತ್ತು.
ಉತ್ತಮ ತೋಟ ಮಾಡಿದ್ದ ಬಾಬುರೆಡ್ಡಿ
ಬಾಬುರೆಡ್ಡಿ ಡಿಎಸ್ಹಳ್ಳಿಯಲ್ಲಿ ಕೆಲ ವರ್ಷಗಳ ಹಿಂದೆ ಉತ್ತಮ ತೋಟ ನಿರ್ಮಿಸಿದ್ದರು. ತೆಂಗು, ಮಾವು ಇತ್ಯಾದಿ ಬೆಳೆದಿದ್ದರು. ಹೈನುಗಾರಿಕೆ ಕೂಡ ನಡೆಸುತ್ತಿದ್ದರು. ಇಷ್ಟೆಲ್ಲ ಇದ್ದು ಏಕೆ ಹೀಗಾಯಿತು? ಎಂಬ ಕೊರಗು ಅನೇಕರನ್ನು ಕಾಡಿದೆ.
ಕುಡುಕರ ಅಡ್ಡೆ
ಪಾಳು ಬಿದ್ದ ಮನೆ ಮೇಲೆ ಹಲವರು ಮದ್ಯ ಸೇವಿಸುತ್ತಿದ್ದರಂತೆ. ಮನೆಯಲ್ಲಿ ಸಾಕಷ್ಟು ಪಾತ್ರೆ, ಫ್ಯಾನ್ ಮತ್ತಿತರ ವಸ್ತುಗಳು ಕಳ್ಳರ ಪಾಲಾಗಿವೆ.