More

    ಮೋಸ್ಟ್​ ವಾಂಟೆಡ್​ ಉಗ್ರ ಮಸೂದ್ ಅಜರ್ ನಿಜವಾಗ್ಲೂ ಸತ್ತಿದ್ದಾನೆಯೇ? ಇಲ್ಲಿದೆ ಅಸಲಿ ಸಂಗತಿ…

    ನವದೆಹಲಿ: ಪಾಕಿಸ್ತಾನದ ಮತ್ತೊಬ್ಬ ಭಯೋತ್ಪಾದಕ ಮತ್ತು ಭಾರತದ ಮೋಸ್ಟ್​ ವಾಂಟೆಡ್​ ಉಗ್ರ ಮಸೂದ್​ ಅಜರ್​, ಬಾಂಬ್​ ದಾಳಿಯಲ್ಲಿ ಭೀಕರ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋಗಳು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

    ದಶಕಗಳಿಂದ ಭಾರತಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ಉಗ್ರ ದಾವೂದ್​ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಮಸೂದ್​ ಅಜರ್​ ಸುದ್ದಿಯೂ ಹೊರಬಿದ್ದಿದೆ. ಆದರೆ, ಇಬ್ಬರು ಉಗ್ರರ ಸಾವಿನ ಅಸಲಿ ಸಂಗತಿ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದರ ನಡುವೆ ಈ ಎರಡೂ ಸುದ್ದಿ ನಕಲಿ ಎಂದು ತಿಳಿದುಬಂದಿದೆ. ಅಲ್ಲದೆ, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಹೆಸರಿನಲ್ಲಿ ಸಾವಿನ ಸುದ್ದಿಯನ್ನು ದೃಢೀಕರಿಸುವ ಸ್ಕ್ರೀನ್‌ಶಾಟ್‌ಗಳು ಕೂಡ ನಕಲಿ ಎಂಬುದು ಬಯಲಾಗಿದೆ.

    2001ರ ಸಂಸತ್ ದಾಳಿ ಸೇರಿದಂತೆ ಅನೇಕ ಭಯೋತ್ಪಾದಕ ದಾಳಿಗಳಿಗಳ ಪ್ರಮುಖ ಸಂಚುಕೋರನಾಗಿರುವ ಮಸೂದ್ ಅಜರ್ ವಿಚಾರಕ್ಕೆ ಬಂದರೆ, ಪಾಕಿಸ್ತಾನದ ಟ್ವಿಟರ್ ಹ್ಯಾಂಡಲ್‌ಗಳಿಂದಲೇ ಆತನ ಸಾವಿನ ಸುದ್ದಿಯನ್ನು ಹರಿಬಿಡಲಾಗಿದೆ. ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸ್ಥಾಪಕ ಮಸೂದ್ ಅಜರ್, ಸೋಮವಾರ ಬೆಳಗ್ಗೆ 5 ಗಂಟೆಗೆ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ನಡೆಸಿದ ಬಾಂಬ್​ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಬರೆಯಲಾಗಿತ್ತು. ವೈಯಕ್ತಿಕ ದ್ವೇಷ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

    ಆದರೆ, ಪಾಕಿಸ್ತಾನದ ಪ್ರಧಾನ ಮಾಧ್ಯಮಗಳಲ್ಲಿ ಈ ಬಗ್ಗೆ ಯಾವುದೇ ಸುದ್ದಿಗಳು ಪ್ರಕಟವಾಗಿಲ್ಲ. ಹೊತ್ತಿ ಉರಿಯುತ್ತಿರುವ ಕಾರಿನ ಫೋಟೋವನ್ನು ಟೈಮ್ಸ್​ ಆಲ್ಜಿಬ್ರಾ ಎಕ್ಸ್​ ಖಾತೆಯಲ್ಲಿ ಮೊದಲು ಪೋಸ್ಟ್​ ಮಾಡಲಾಗಿದೆ. ಮುಜಫರಾಬಾದ್ ಸುದ್ದಿ ಬುಲೆಟಿನ್ ಕೂಡ ಇದೇ ಫೋಟೋವನ್ನು ಬಳಸಿದೆ. ಈ ಫೋಟೋ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಅಸಲಿ ಸಂಗತಿ ಬಯಲಾಗಿದೆ.

    ಕಳೆದ ನವೆಂಬರ್​ 3ರಂದು ಓಎಸ್​ಐಎನ್​ಟಿ ಹೆಸರಿನ ಎಕ್ಷ್​ ಖಾತೆಯಲ್ಲಿ ಇದೇ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ದೇರಾ ಇಸ್ಮಾಯಿಲ್​ ಖಾನ್​ನಲ್ಲಿ ಪೊಲೀಸ್​ ವ್ಯಾನ್​ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 6 ಮಂದಿ ಮೃತಪಟ್ಟು 25 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಓಎಸ್​ಐಎನ್​ಟಿ ಕೂಡ ಅದೇ ಫೋಟೋವನ್ನು ಮರುಬಳಕೆ ಮಾಡಿದಂತೆ ತೋರುತ್ತದೆ. ಏಕೆಂದರೆ, ಈ ಫೋಟೋವನ್ನು 2019ರಲ್ಲಿ ಹಸ್ನತ್ ಅಲಿ ಎಂಬ ಟ್ವಿಟರ್​ ಖಾತೆಯಲ್ಲಿ ಮೊದಲ ಬಾರಿಗೆ ಪೋಸ್ಟ್ ಮಾಡಲಾಗಿದೆ. ಸ್ಫೋಟದಲ್ಲಿ ಮೂವರು ಟಿಕ್‌ಟಾಕರ್‌ಗಳು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಪಾಕಿಸ್ತಾನದಲ್ಲಿ ಕೆಲವು ದಿನಗಳಿಂದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಮುಖಂಡರು ನಿಗೂಢ ಸಂದರ್ಭಗಳಲ್ಲಿ ಸಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. 2001ರಲ್ಲಿ ಭಾರತೀಯ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈ ದಾಳಿ, 2016 ರ ಪಠಾಣ್‌ ಕೋಟ್ ದಾಳಿ ಮತ್ತು 2019ರ ಪುಲ್ವಾಮಾ ದಾಳಿಗಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಸಂಘಟನೆಯನ್ನು ಮಸೂದ್​ ಅಜರ್​ ಸ್ಥಾಪಿಸಿದ್ದಾನೆ. ಈತ 2005ರಲ್ಲಿ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಸ್ಥಾನದ ಮೇಲೆಯೂ ಟಾರ್ಗೆಟ್​ ಮಾಡಿದ್ದ.

    ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಅಜರ್ ಕಾಶ್ಮೀರದ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದನು. ಜಿಹಾದಿಯನ್ನು ಬ್ರಿಟನ್‌ಗೆ ಪರಿಚಯಿಸಿದವನು ಈತ. ಮೇ 1, 2019 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಜರ್​ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ. (ಏಜೆನ್ಸೀಸ್​)

    ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಸಾವು; ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್

    ಅರೇ..ಇದೆಂಥಾ ವಿಚಿತ್ರ ಶಾಟ್​! ಮ್ಯಾಕ್ಸಿಯ ಹೊಸ ಹೊಡೆತಕ್ಕೆ ಏನೆಂದು ಕರೀಬೇಕು ನೀವೇ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts