ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲು; ಐಸಿಸಿ ಕದ ತಟ್ಟಲು ಮುಂದಾದ ಪಿಸಿಬಿ

Pakistan
Published on

ನವದೆಹಲಿ: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಸೋತಿರುವ ಪಾಕ್​ ಈ ವಿಚಾರವಾಗಿ ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ ಗಮನಕ್ಕೆ ತರಲು ಮುಂದಾಗಿದೆ. ಎರಡನೇ ಟೆಸ್ಟ್​ ಪಂದ್ಯದಲ್ಲಿ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಮೊಹಮ್ಮದ್​ ರಿಜ್ವಾನ್​ ಔಟಾಗಿರುವ ಕುರಿತು ತಗಾದೆ ತೆಗೆದಿರುವ ಪಿಸಿಬಿ ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ಕದ ತಟ್ಟಲು ನಿರ್ಧರಿಸಿದೆ.

ಪಾಕಿಸ್ತಾನ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಿವೆ. ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ, ಸರಣಿಯನ್ನು 2–0 ಅಂತರದಿಂದ ವಶಪಡಿಸಿಕೊಂಡಿದೆ. ಆದರೆ, ಎರಡನೇ ಟೆಸ್ಟ್​ ಪಂದ್ಯದಲ್ಲಿ ಮೊಹಮ್ಮದ್‌ ರಿಜ್ವಾನ್‌ ಅವರು ಔಟ್‌ ಎಂದು ಅಂಪೈರ್‌ ನೀಡಿದ್ದ ತೀರ್ಪು ಚರ್ಚೆ ಹುಟ್ಟುಹಾಕಿದೆ.

ಮೆಲ್ಬೋರ್ನ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 318 ರನ್‌ ಗಳಿಸಿ ಆಲೌಟ್‌ ಆಗಿತ್ತು. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಪಾಕ್‌, 264 ರನ್‌ ಗಳಿಸಿತ್ತು. 54 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ 262ರನ್‌ಗಳಿಗೆ ಆಲೌಟ್​ ಆಗುವ ಮೂಲಕ ಎದುರಾಳಿ ತಂಡಕ್ಕೆ 317 ರನ್​ಗಳ ಗುರಿ ನೀಡಿತ್ತು.

ಗುರಿ ಬೆನ್ನತ್ತಿದ ಪಾಕ್‌ ತಂಡ 60 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 219 ರನ್‌ ಗಳಿಸಿತ್ತು. ಈ ವೇಳೆ ಬ್ಯಾಟಿಂಗ್​ ಮಾಡುತ್ತಿದ್ದ ಮೊಹಮ್ಮದ್​ ರಿಜ್ವಾನ್​ ಹಾಗೂ ಅಘಾ ಸಲ್ಮಾನ್ ಜೋಡಿ ಕ್ರೀಸ್​ನಲ್ಲಿತ್ತು. ಆದರೆ, 61ನೇ ಓವರ್ ಎಸೆದ ಆಸಿಸ್‌ ನಾಯಕ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಓವರ್‌ನ ನಾಲ್ಕನೇ ಎಸೆತ ಅಂದಾಜಿಸದ ರಿಜ್ವಾನ್, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಚೆಂಡು ಗ್ಲೌಸ್​ಗೆ ತೀರಾ ಹತ್ತಿರದಲ್ಲೇ ಸಾಗಿ, ವಿಕೆಟ್‌ ಕೀಪರ್‌ ಕೈ ಸೇರಿತು.

ಕಮಿನ್ಸ್‌ ಹಾಗೂ ಸಹ ಆಟಗಾರರು ಔಟ್‌ಗಾಗಿ ಮನವಿ ಮಾಡಿದರು. ಅಂಪೈರ್‌ ಔಟ್‌ ನೀಡಲಿಲ್ಲ. ಈ ವೇಳೆ, ಆಸಿಸ್‌ ಡಿಆರ್‌ಎಸ್‌ ಮನವಿ ಮಾಡಿತು. ಪರಿಶೀಲನೆ ವೇಳೆ ಚೆಂಡು ಗ್ಲೌಸ್​ಗೆ ತಾಗಿದೆ ಎಂದು ಔಟ್‌ ನೀಡಲಾಯಿತು. ಆಗ ರಿಜ್ವಾನ್‌ ಆಕ್ಷೇಪ ವ್ಯಕ್ತಪಡಿಸಿದರಾದರೂ ಪೆವಿಲಿಯನ್‌ಗೆ ಮರಳದೆ ಬೇರೆ ದಾರಿ ಇರಲಿಲ್ಲ. ರಿಜ್ವಾನ್‌ ಔಟಾದ ಬಳಿಕ ಪಾಕ್‌ ತಂಡದ ಉಳಿದ 4 ವಿಕೆಟ್‌ಗಳು 18 ರನ್‌ ಅಂತರದಲ್ಲಿ ಉರುಳಿದವು. ಅಂತಿಮವಾಗಿ ಪಾಕ್​ ತಂಡ 79 ರನ್‌ ಅಂತರದಿಂದ ಸೋಲುಂಡಿತ್ತು.

ಐಸಿಸಿ ಕದ ತಟ್ಟಲು ಸಜ್ಜಾದ ಪಾಕ್

ಪಂದ್ಯದ ವೇಳೆ ಅಂಪೈರ್‌ಗಳು ನೀಡಿದ ತೀರ್ಪುಗಳು ಮತ್ತು ತಂತ್ರಜ್ಞಾನ ಬಳಸಿದ ರೀತಿಯ ಬಗ್ಗೆ, ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ತಂಡದ ನಿರ್ದೇಶಕ ಮೊಹಮ್ಮದ್‌ ಹಫೀಜ್‌ ಅವರೊಂದಿಗೆ ಮಾತನಾಡಿದ್ದಾರೆ. ಇದೀಗ ರಿಜ್ವಾನ್‌ ಔಟ್‌ ವಿಚಾರವಾಗಿ ಐಸಿಸಿ ಎದುರು ಚರ್ಚಿಸಲು ಪಿಸಿಬಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಂದ್ಯದ ಬಳಿಕ ಮಾತನಾಡಿದ ಹಫೀಜ್‌, ಇಡೀ ಪಂದ್ಯವನ್ನು ಗಮನಿಸಿದರೆ, ಅಂಪೈರ್‌ಗಳು ಅಸಮರ್ಪಕವಾದ ತೀರ್ಪುಗಳನ್ನು ನೀಡಿದ್ದು ತಿಳಿಯುತ್ತದೆ. ನಾವು ಸ್ವಾಭಾವಿಕವಾಗಿ ತುಂಬಾ ಉತ್ತಮವಾಗಿ ಆಡಿದೆವು. ಕ್ರಿಕೆಟ್‌ನ ಮೂಲ ಅಂಶಗಳು ಚೆನ್ನಾಗಿ ಅರಿತಿದ್ದೇವೆ. ಆದಾಗ್ಯೂ, ನಿಜವಾದ ಕ್ರಿಕೆಟ್‌ಗಿಂತ ಹೆಚ್ಚಾಗಿ ತಂತ್ರಜ್ಞಾನದ ಮೇಲೆ ಅವಲಂಬಿತವಾದಂತೆ ಕೆಲವೊಮ್ಮೆ ಭಾಸವಾಗುತ್ತದೆ. ಈ ವಿಚಾರದಲ್ಲಿ ಸುಧಾರಣೆಯಾಗಬೇಕಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net