

Rajat Patidar: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತಮ್ಮ ಬಹುನಿರೀಕ್ಷಿತ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ನಲ್ಲಿ ಫೈನಲ್ ತಲುಪಿರುವ ಆರ್‌ಸಿಬಿ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಗುರುವಾರ ಮುಲ್ಲನ್ಪುರದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿ, ಫೈನಲ್ ಲಗ್ಗೆ ಇಟ್ಟಿದೆ. 2016ರ ನಂತರ ಆರ್‌ಸಿಬಿ ಫೈನಲ್ ತಲುಪಿದ್ದು ಇದೇ ಮೊದಲು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಕೇವಲ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ಪಂಜಾಬ್ ಪರ ಮಾರ್ಕಸ್ ಸ್ಟೊಯಿನಿಸ್ (26) ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡರು. ಆರ್‌ಸಿಬಿ ಬೌಲರ್‌ಗಳಲ್ಲಿ ಸುಯಾಶ್ ಶರ್ಮಾ ಮತ್ತು ಜೋಶ್ ಹ್ಯಾಸಲ್‌ವುಡ್ ತಲಾ ಮೂರು ವಿಕೆಟ್ ಪಡೆದರು. ಯಶ್ ದಯಾಳ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಪಂಜಾಬ್ ನೀಡಿದ ಸಣ್ಣ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ, ಫಿಲ್ ಸಾಲ್ಟ್ (56 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಪಂಜಾಬ್ ಬೌಲರ್‌ಗಳಾದ ಮುಶೀರ್ ಖಾನ್ ಮತ್ತು ಕೈಲ್ ಜೇಮಿಸನ್ ತಲಾ ಒಂದು ವಿಕೆಟ್ ಪಡೆದರು.
ಪಂದ್ಯ ಗೆದ್ದು ಫೈನಲ್ ತಲುಪಿದ ನಂತರ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸಂತೋಷ ವ್ಯಕ್ತಪಡಿಸಿದರು. ಆರ್‌ಸಿಬಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಟಿದಾರ್, ಚಿನ್ನಸ್ವಾಮಿ ಮಾತ್ರವಲ್ಲದೆ ಪಂದ್ಯ ನಡೆಯುವಲ್ಲೆಲ್ಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ತಂಡಕ್ಕೆ ತವರು ನೆಲದ ಅನುಭವವನ್ನು ನೀಡುತ್ತಿದ್ದಾರೆ ಎಂದರು. ಇದು ಇನ್ನೂ ಮುಗಿದಿಲ್ಲ, ನಾವು ಇನ್ನೊಂದು ಪಂದ್ಯವನ್ನು ಗೆಲ್ಲಬೇಕು. ಅದಾದ ನಂತರ, ನಾವೆಲ್ಲರೂ ಒಟ್ಟಾಗಿ ದೊಡ್ಡ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಪಂದ್ಯದ ಬಗ್ಗೆ ಮಾತನಾಡುತ್ತಾ, ನಾವು ಸ್ಪಷ್ಟ ಬೌಲಿಂಗ್ ಯೋಜನೆಯೊಂದಿಗೆ ಪಂದ್ಯಕ್ಕೆ ಇಳಿದೆವು. ವಿಶೇಷವಾಗಿ ವೇಗಿಗಳು ಈ ಪಿಚ್ ಅನ್ನು ಚೆನ್ನಾಗಿ ಬಳಸಿಕೊಂಡರು ಎಂದು ಮೆಚ್ಚುಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಯುವ ಲೆಗ್ ಸ್ಪಿನ್ನರ್ ಸುಯಾಶ್ ಶರ್ಮಾ ಬೌಲಿಂಗ್ ಬಗ್ಗೆಯೂ ಮಾತನಾಡಿದರು. ಸುಯಾಶ್ ಅವರು ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ ರೀತಿ ಉತ್ತಮವಾಗಿತ್ತು. ನಾಯಕನಾಗಿ ಅವರ ಬೌಲಿಂಗ್ ಬಗ್ಗೆ ನನಗೆ ಸಂಪೂರ್ಣ ಸ್ಪಷ್ಟತೆ ಇದೆ. ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಅವರನ್ನು ಅಂದಾಜಿಸುವುದು ಕಷ್ಟ. ಅವರು ಸ್ಟಂಪ್‌ಗಳನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡಬೇಕು. ಅದು ಅವರ ಶಕ್ತಿ' ಎಂದು ಪಾಟಿದಾರ್ ಹೇಳಿದರು.
ಕೊನೆಯ ಲೀಗ್ ಪಂದ್ಯ ಮತ್ತು ಮೊದಲ ಕ್ವಾಲಿಫೈಯರ್ ನಡುವೆ ಕೇವಲ ಒಂದು ದಿನ ಮಾತ್ರ ಇದ್ದಿದ್ದರಿಂದ ಆರ್‌ಸಿಬಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಸಿಗಲಿಲ್ಲ. ಈ ಬಗ್ಗೆ ಮಾತನಾಡಿದ ಪಾಟಿದಾರ್, ನಾವು ಟೂರ್ನಿಯಾದ್ಯಂತ ಸಾಕಷ್ಟು ಅಭ್ಯಾಸ ಮಾಡಿದ್ದೇವೆ. ಆದ್ದರಿಂದ, ಒಂದು ದಿನ ಅಭ್ಯಾಸವನ್ನು ತಪ್ಪಿಸುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದರು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಬಗ್ಗೆ ಮಾತನಾಡಿ, ಅವರು ತುಂಬಾ ಚೆನ್ನಾಗಿ ಆಡುತ್ತಾರೆ ಮತ್ತು ಉತ್ತಮ ಆರಂಭವನ್ನು ನೀಡುತ್ತಾರೆ. ನಾನು ಫಿಲ್ ಸಾಲ್ಟ್ ಬ್ಯಾಟಿಂಗ್‌ನ ದೊಡ್ಡ ಅಭಿಮಾನಿ. ಡಗೌಟ್‌ನಿಂದ ಅವರ ಆಟವನ್ನು ನೋಡುವುದು ತುಂಬಾ ಮಜಾ ಕೊಡುತ್ತದೆ ಎಂದು ಹೇಳಿದರು. ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಪಾಟಿದಾರ್, ನಾವು ಇನ್ನೂ ಒಂದು ಪಂದ್ಯವನ್ನು ಗೆಲ್ಲಬೇಕು ಮತ್ತು ನಂತರ ನಾವು ಒಟ್ಟಿಗೆ ಆಚರಿಸುತ್ತೇವೆ ಎಂದರು.
8 ವಿಕೆಟ್ಗಳಿಂದ ಕ್ವಾಲಿಫೈಯರ್ 1ರಲ್ಲಿ ಗೆದ್ದ ಆರ್‌ಸಿಬಿ, 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. (ಏಜೆನ್ಸೀಸ್)