ಈ ಎರಡು ಸಂಗತಿ ನಿಜವಾದರೆ RCB ಟ್ರೋಫಿ ಜಯಿಸುವುದನ್ನು ಯಾರಿಂದಲೂ ತಡೆಯಲಾಗದು!

RCB
Published on

RCB : ಇಂಡಿಯನ್​​ ಪ್ರೀಮಿಯರ್ ಲೀಗ್-2025 ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್‌ಗೆ ಲಗ್ಗೆ ಇಟ್ಟಿರುವುದು ಎಲ್ಲರಿಗೂ ತಿಳಿದಿದೆ. ಬರೋಬ್ಬರಿ 9 ವರ್ಷಗಳ ಬಳಿಕ ಆರ್​ಸಿಬಿ ಐಪಿಎಲ್​ ಫೈನಲ್​ ಪ್ರವೇಶಿಸಿದೆ. ಕೊನೆಯದಾಗಿ 2016ರಲ್ಲಿ ಫೈನಲ್​ ಪ್ರವೇಶಿಸಿ ಎಸ್​ಆರ್​ಎಚ್​ ವಿರುದ್ಧ ಸೋಲುಂಡಿದ್ದ ಆರ್​ಸಿಬಿ ಈ ಬಾರಿ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದೆ. ಹೀಗಿರುವಾಗ ಈ ಎರಡು ಭಾವನೆ (ಸೆಂಟಿಮೆಂಟ್) ನಿಜವಾದರೆ, ಈ ಬಾರಿ ಆರ್​ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡ ಕಳೆದ ಏಳು ಫೈನಲ್‌ಗಳಲ್ಲಿ ಗೆಲುವು ಕಂಡು ಟ್ರೋಫಿ ಎತ್ತಿಹಿಡಿದಿದ್ದಾರೆ. ಇದು 2018 ರಿಂದ 2024 ರವರೆಗಿನ ಎಲ್ಲಾ ಐಪಿಎಲ್ ಸೀಸನ್‌ಗಳಲ್ಲಿ ಇದು ಸಂಭವಿಸಿದೆ. ಇದೇ ಭಾವನೆ ಅಂತಾ ಸೆಂಟಿಮೆಂಟ್​ ವರ್ಕೌಟ್ ಆಗಿದ್ದರೆ, ಈ ಬಾರಿ ಆರ್‌ಸಿಬಿ ಐಪಿಎಲ್ ಪ್ರಶಸ್ತಿ ವಿಜೇತರಾಗಿ ಹೊರಹೊಮ್ಮಲಿದೆ.

ಕಳೆದ ಏಳು ಸೀಸನ್​ಗಳಲ್ಲಿ ಕ್ವಾಲಿಫೈಯರ್ 1 ಅನ್ನು ಗೆದ್ದ ಮತ್ತು ಫೈನಲ್ ಅನ್ನು ಗೆದ್ದ ತಂಡಗಳು ಈ ಕೆಳಕಂಡಂತಿವೆ.

* 2018: ಚೆನ್ನೈ ಸೂಪರ್​ ಕಿಂಗ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2019: ಮುಂಬೈ ಇಂಡಿಯನ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2020: ಮುಂಬೈ ಇಂಡಿಯನ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2021: ಚೆನ್ನೈ ಸೂಪರ್​ ಕಿಂಗ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2022: ಗುಜರಾತ್​ ಟೈಟಾನ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2023: ಚೆನ್ನೈ ಸೂಪರ್​ ಕಿಂಗ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

* 2024: ಕೋಲ್ಕತ ನೈಟ್​ ರೈಡರ್ಸ್​ (ಕ್ವಾಲಿಫೈಯರ್ 1 ಗೆದ್ದಿದೆ)

ಈಗ ಆರ್‌ಸಿಬಿ ತಂಡ ಕ್ವಾಲಿಫೈಯರ್ 1ರಲ್ಲಿ ಗೆದ್ದಿದೆ. ಇದರೊಂದಿಗೆ, ಕಳೆದ ಏಳು ಸೀಸನ್​ಗಳ ಭಾವನೆ ಈ ಬಾರಿಯೂ ಪುನರಾವರ್ತನೆಯಾಗಲಿದೆ ಮತ್ತು ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂದು ತಂಡದ ಅಭಿಮಾನಿಗಳು ಹೇಳುತ್ತಿದ್ದಾರೆ.

18ರ ನಂಟು ಖುಷಿಯ ಗಂಟು

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನ 18ನೇ ಆವೃತ್ತಿ. ಈ 18ನೇ ನಂಬರ್​ಗೂ ಆರ್​ಸಿಬಿಗೂ ಒಂದು ಬಿಡಿಸಲಾಗದ ಬಂಧವಿದೆ. ಅದೇನೆಂದರೆ, ಐಪಿಎಲ್​ ಶುರುವಾದಾಗಿನಿಂದ ಆರ್​ಸಿಬಿ ಪರ ಆಡುತ್ತಿರುವ ದಾಖಲೆಗಳ ಸರದಾರ, ರನ್​ ಮೆಷಿನ್​ ವಿರಾಟ್​ ಕೊಹ್ಲಿ ಅವರ ಲಕ್ಕಿ ನಂಬರ್​ 18. ಇದೇ ನಂಬರ್​ ಅನ್ನು ನೀವು ವಿರಾಟ್​ ಅವರ ಜರ್ಸಿಯ ಮೇಲೂ ನೋಡಬಹುದು. ನಾನು ಆಗಸ್ಟ್​ 18ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ನನ್ನ ತಂದೆ 2006ರ ಡಿಸೆಂಬರ್​ 18ರಂದು ಮೃತಪಟ್ಟರು. ಈ ಎರಡು ಮಹತ್ವದ ಕ್ಷಣಗಳು 18ರಂದೇ ನಡೆಯಿತು. ಈ ದಿನಾಂಕದೊಂದಿಗೆ ಬ್ರಹ್ಮಾಂಡದ ಸಂಪರ್ಕವಿದೆ ಎಂದು ನನಗೆ ತೋರುತ್ತದೆ ಎಂದು ಈ ಹಿಂದೆ ಕೊಹ್ಲಿ ಹೇಳಿದ್ದಾರೆ. 18 ಕೊಹ್ಲಿಯ ಲಕ್ಕಿ ನಂಬರ್​ ಆಗಿರುವುದರಿಂದ ಈ ಸೆಂಟಿಮೆಂಟ್​ ನಿಜವಾದರೆ ಈ ಬಾರಿ ಆರ್​ಸಿಬಿ ಐಪಿಎಲ್​ ಟ್ರೋಫಿ ಜಯಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.

ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಮೇ 29) ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್​ಸಿಬಿ ಬೌಲರ್‌ಗಳ ಅಬ್ಬರದಿಂದ ಪಂಜಾಬ್ ಆರಂಭದಿಂದಲೇ ತೀವ್ರ ಸಂಕಷ್ಟದಲ್ಲಿ ಸಿಲುಕಿತು. 50 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಒಬ್ಬ ಬ್ಯಾಟ್ಸ್‌ಮನ್ ಕೂಡ 26 ರನ್‌ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಆ ತಂಡದಲ್ಲಿ ಅತಿ ಹೆಚ್ಚು ಸ್ಕೋರರ್ ಸ್ಟೊಯಿನಿಸ್. ಅವರು 26 ರನ್ ಗಳಿಸಿದರು. ಪಂಜಾಬ್ ಸತತ ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಆರ್​ಸಿಬಿ ಬೌಲರ್​ಗಳು ನಿನ್ನೆ ಜಾದೂ ಮಾಡಿದರು. ಸುಯಾಶ್ ಶರ್ಮಾ ಮತ್ತು ಜೋಶ್​ ಹ್ಯಾಸಲ್‌ವುಡ್ ತಲಾ 3 ವಿಕೆಟ್ ಪಡೆದರೆ, ಯಶ್ ದಯಾಳ್ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಇದಾದ ಬಳಿಕ ಸಣ್ಣ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡ 10 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 106 ರನ್ ಗಳಿಸಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (12 ರನ್​, 2 ಬೌಂಡರಿ) ಬೇಗನೆ ಔಟಾದರು. ಫಿಲ್ ಸಾಲ್ಟ್ (ಅಜೇಯ 56 ರನ್​, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅಜೇಯ ಅರ್ಧಶತಕದೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 8 ವಿಕೆಟ್​ಗಳಿಂದ ಕ್ವಾಲಿಫೈಯರ್​ 1ರಲ್ಲಿ ಗೆದ್ದ ಆರ್​ಸಿಬಿ, 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್​ಸಿಬಿ ತಂಡ ಕ್ವಾಲಿಫೈಯರ್-2 ವಿಜೇತರನ್ನು ಎದುರಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net