ವರ್ಮಾ ಸಹವಾಸಕ್ಕೆ ಹೋಗಬೇಡಿ ... ಅಭಿಮಾನಿಗಳಿಗೆ ಪವನ್​ ಕಲ್ಯಾಣ್​ ತಾಕೀತು

Pavan Kalyan - RGV Final
Published on

ಅದ್ಯಾಕೋ ಗೊತ್ತಿಲ್ಲ, ಪವನ್​ ಕಲ್ಯಾಣ್​ ಅವರನ್ನು ಟಾರ್ಗೆಟ್​ ಮಾಡುತ್ತಲೇ ಬಂದಿರುವ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ, ಒಂದಲ್ಲಾ ಒಂದು ರೀತಿಯಲ್ಲಿ ಕಾಳೆಯುತ್ತಲೇ ಇರುತ್ತಾರೆ. ಈ ಬಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, 'ಪವರ್​ ಸ್ಟಾರ್​' ಎಂಬ ಚಿತ್ರ ಪ್ರಾರಂಭಿಸಿ, ಅದರಲ್ಲಿ ಪವನ್​ ಕಲ್ಯಾಣ್ ತರಹವೇ ಇರುವ ಒಬ್ಬ ನಟನನ್ನು ಅದೆಲ್ಲೋ ಹುಡುಕಿ ತಂದು, ಪರಿಚಯಿಸುತ್ತಿದ್ದಾರೆ.

ರಾಮ್​ಗೋಪಾಲ್​ ವರ್ಮಾ ಇಷ್ಟೆಲ್ಲಾ ಮಾಡುತ್ತಿದ್ದರೂ, ಪವನ್​ ಕಲ್ಯಾಣ್​ ಆಗಲೀ, ಅವರ ಸಹೋದರ ನಾಗಬಾಬು ಆಗಲೀ, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳಾಗಲೀ ತುಟಿಕ್ ಪಿಟಿಕ್​ ಎಂದಿಲ್ಲ. ಈ ಹಿಂದೆ ಇದೇ ತರಹ ಏನಾದರೂ ಆಗಿದ್ದರೆ, ತೊಂದರೆ ಕೊಟ್ಟವರಿಗೆ ತಕ್ಕ ಪಾಠ ಕಲಿಸುತ್ತಿದ್ದರು ಪವನ್​ ಕಲ್ಯಾಣ್​ ಫ್ಯಾನ್ಸ್​. ಆದರೆ, ಈ ಬಾರಿ ಮಾತ್ರ ಯಾರೂ, ಯಾಕೆ ಮಾತಾಡುತ್ತಿಲ್ಲ ಎಂಬ ಪ್ರಶ್ನೆ ಟಾಲಿವುಡ್​ನಲ್ಲಿ ಕಾಡುತ್ತಿದೆ.

ಮೂಲಗಳ ಪ್ರಕಾರ, ರಾಮ್​ಗೋಪಾಲ್​ ವರ್ಮಾ ಬಗ್ಗೆ ಏನನ್ನೂ ಹೇಳಬೇಡಿ ಎಂದು ಖುದ್ದು ಪವನ್​ ಕಲ್ಯಾಣ್​, ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಾರೇ ಆಗಲಿ, ತಮ್ಮ ಬಗ್ಗೆ ಒಬ್ಬರು ಚಿತ್ರ ಮಾಡುತ್ತಿದ್ದಾರೆ ಎಂದರೆ ಗಾಬರಿಗೊಳ್ಳುವುದು ಸಹಜ. ಆದರೆ, ಪವನ್​ ಮಾತ್ರ ಕೂಲ್​ ಆಗಿರುವುದಷ್ಟೇ ಅಲ್ಲ, ತಮ್ಮ ಅಭಿಮಾನಿಗಳಿಗೂ ಕೂಲ್​ ಆಗಿ ಇರುವುದಕ್ಕೆ ಯಾಕೆ ಹೇಳಿರಬಹುದು ಎಂಬ ಪ್ರಶ್ನೆ ಹಲವರನ್ನು ಕಾಡಿದೆ.

ಇದಕ್ಕೆ ಉತ್ತರ ಏನೆಂದರೆ, ವರ್ಮಾ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದಕ್ಕೆ ಪವನ್​ ತೀರ್ಮಾನಿಸಿದ್ದಾರೆ. ಏಕೆಂದರೆ, ವರ್ಮಾಗೆ ಎಂಥಾ ವಿಷಯವನ್ನಾದರೂ ಪಾಸಿಟಿವ್​ ಆಗಿ, ಪ್ರಚಾರಕ್ಕಾಗಿ ಬಳಸಿಕೊಳ್ಳುವ ಚಾಣಾಕ್ಷತನವಿದೆ. ಹೀಗಿರುವಾಗ, ಏನೋ ಹೇಳುವುದಕ್ಕೆ ಹೋಗಿ, ಇನ್ನೇನೋ ಆಗುವ ಬದಲು, ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟರೆ, ಆಗ ವರ್ಮಾ ಉದ್ದೇಶ ಈಡೇರಿವುದಿಲ್ಲ.

ಹಾಗಾಗಿ ವರ್ಮಾ ಮತ್ತು 'ಪವರ್​ ಸ್ಟಾರ್​' ಚಿತ್ರವನ್ನು ಪವನ್​ ಕಲ್ಯಾಣ್​ ಒಬ್ಬರು ನಿರ್ಲಕ್ಷಿಸಿರುವುದು ಅಷ್ಟೇ ಅಲ್ಲ, ತಮ್ಮ ಅಭಿಮಾನಿಗಳಿಗೂ ಅದೇ ದಾರಿಯಲ್ಲಿ ನಡೆಯುವುದಕ್ಕೆ ಸಲಹೆ ನೀಡಿದ್ದಾರಂತೆ. ಚಿತ್ರದ ಕುರಿತು ಸುದ್ದಿಯಾದಾಗ, ಪವನ್​ ಮತ್ತು ಅವರ ಅಭಿಮಾನಿಗಳು ದೊಡ್ಡ ಗಲಾಟೆ ಮಾಡಬಹುದು ಎಂದು ನಿರೀಕ್ಷಿಸಿದ್ದ ವರ್ಮಾ ಅವರಿಗೆ ಈ ನಿರ್ಲಕ್ಷ್ಯದಿಂದ ಏನಾಗುತ್ತಿದೆಯೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net