ಹೃದ್ರೋಗಕ್ಕೆ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರ ಹೃದಯವನ್ನೇ ಗೆದ್ದ ರೋಗಿ!

Doctor
Published on

ಮಂಗಳೂರು: 'ವೈದ್ಯೋ ನಾರಾಯಣೋ ಹರಿ' ಎಂಬ ಮಾತಿದೆ. ಜೀವ ಉಳಿಯುವಂತೆ ಚಿಕಿತ್ಸೆ ನೀಡುವ ವೈದ್ಯರನ್ನು ಹಲವರು ದೇವರೆಂದೇ ಭಾವಿಸುತ್ತಾರೆ. ಅಂಥ ಚಿಕಿತ್ಸೆ ಪಡೆದವರೊಬ್ಬರು ವೈದ್ಯರನ್ನು ದೇವರೆಂಬಂತೆ ಧನ್ಯತಾಭಾವದಿಂದ ನೋಡಿದ ದೃಶ್ಯದ ಫೋಟೋ ಹಲವರ ಮನ ಸೆಳೆದಿದೆ.

ಇಂಥದ್ದೊಂದು ಸನ್ನಿವೇಶ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕಂಡುಬಂದಿದೆ. ಇಲ್ಲಿನ ಕೆಎಂಸಿ ಆಸ್ಪತ್ರೆಯ ಇಂಟರ್​ವೆನ್ಷನಲ್​ ಕಾರ್ಡಿಯೊಲಜಿಸ್ಟ್​ ಡಾ.ಪದ್ಮನಾಭ ಕಾಮತ್​ ಅವರು ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಕೃತಜ್ಞತೆ ಸಲ್ಲಿಸಿದ ಪರಿಯನ್ನು ಫೋಟೋ ಮೂಲಕ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಮೂರು ವಾರಗಳ ಹಿಂದೆ ಹೃದ್ರೋಗಕ್ಕೆ ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಚೇತರಿಸಿಕೊಂಡು ಬಂದು ನಡೆದುಕೊಂಡ ರೀತಿಗೆ ಅವರು ಮನಸೋತಿದ್ದಾರೆ.

ನಾವು ಇವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದೆವು. ಜೀವ ಉಳಿಸಿದ ಕೆಲಸ ಮಾಡಿದ್ದಕ್ಕೆ ಇವರು ನಮಗೆ ದೇವರ ಪ್ರಸಾದ ತಂದುಕೊಟ್ಟಿದ್ದಲ್ಲದೆ, ಸಾಷ್ಟಾಂಗ ನಮಸ್ಕಾರ ಮಾಡಲು ಬಂದರು. ಇಂಥದ್ದೊಂದು ಕೃತಜ್ಞತೆ ವ್ಯಕ್ತವಾಗಿದ್ದಕ್ಕೆ ಪ್ರತಿಯಾಗಿ ನಾನು ನನ್ನೆಲ್ಲ ರೋಗಿಗಳಿಗೆ ಶಿರಬಾಗುತ್ತೇನೆ, ಇದು ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿ ಎಂದು ಅವರು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net