'ಪಠಾಣ್​' ಹೆಸರು ಬದಲಾಗುತ್ತಾ? ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಾ?

Pathaan
Published on

ಮುಂಬೈ: ಶಾರೂಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್​' ಚಿತ್ರದ ಬಿಡುಗಡೆಗೆ ಇನ್ನು 22 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮಧ್ಯೆ, ಚಿತ್ರದ ಹೆಸರು ಬದಲಾಗುತ್ತಾ? ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತದಾ? ಎಂಬ ಪ್ರಶ್ನೆಗಳು ಬಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿವೆ.

'ಪಠಾಣ್​' ಚಿತ್ರದ 'ಬೇಷರಮ್​ ರಂಗ್​' ಹಾಡಿನ ವಿವಾದ ಬಗ್ಗೆ ಗೊತ್ತೇ ಇದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದು, ಈ ಹಾಡನ್ನು ಡಿಲೀಟ್​ ಮಾಡಬೇಕು, ಇಲ್ಲವಾದರೆ ಚಿತ್ರವನ್ನು ಬಾಯ್ಕಾಟ್​ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಈ ಮಧ್ಯೆ, ಚಿತ್ರ ಮತ್ತು ಹಾಡು ನೋಡಿರುವ ಸೆನ್ಸಾರ್​ ಮಂಡಳಿಯು ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದು, ಆ ಬದಲಾಗವಣೆಗಳನ್ನು ಅಳವಡಿಸಿಕೊಂಡು, ತಂದು ಚಿತ್ರ ತೋರಿಸಬೇಕು ಎಂದು ಸೂಚಿಸಿದೆ.

ಈಗ ಚಿತ್ರತಂಡದವರು ಸೂಕ್ತ ಬದಲಾವಣೆಗಳನ್ನು ಮಾಡುವುದರಲ್ಲಿ ತೊಡಗಿದ್ದು, ಸದ್ಯದಲ್ಲೇ ಸೆನ್ಸಾರ್​ಗೆ ಚಿತ್ರ ತೋರಿಸುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರದ ಟ್ರೈಲರ್​ ಬಿಡುಗಡೆ ಆಗಿರಬೇಕಿತ್ತು. ಆದರೆ, ಚಿತ್ರತಂಡದವರು ಬೇರೆಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಚಿತ್ರದ ಟ್ರೈಲರ್​ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇದರಿಂದ ಹಲವು ಊಹಾಪೋಹಗಳು ಎದ್ದಿವೆ.

ಪ್ರಮುಖವಾಗಿ, ಚಿತ್ರದ ಹೆಸರು ಬದಲಾಗುವ ಸಾಧ್ಯತೆ ಇದೆ ಮತ್ತು ಹಾಡಿನಲ್ಲಿ ದೀಪಿಕಾ ತೊಟ್ಟಿರುವ ಬಿಕಿನಿ ಬಣ್ಣ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರದ ಕೆಲಸಗಳಿಗೆ ಅಡೆತಡೆಗಳು ಉಂಟಾಗಿರುವುದರಿಂದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಇದೆ. ಹಾಗೇನಾದರೂ ಆದರೆ, ಜ.25ಕ್ಕೆ ಚಿತ್ರ ಬಿಡುಗಡೆಯಾಗುವುದಿಲ್ಲ. ಈ ವಿಷಯವನ್ನು ಸ್ವಯಂಘೋಷಿತ ವಿಮರ್ಶಕ ಕೆಆರ್​ಕೆ ಸಹ ಸ್ಪಷ್ಟಪಡಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಚಿತ್ರತಂಡದವರಿಂದ ಚಿತ್ರದ ಕುರಿತು ಹಲವು ಅಪ್​ಡೇಟ್​ಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ, ಚಿತ್ರತಂಡದವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈಗ ಎದ್ದಿರುವ ಊಹಾಪೋಹಗಳನ್ನು ಚಿತ್ರತಂಡದವರು ಸುಳ್ಳು ಮಾಡುತ್ತಾರೋ ಅಥವಾ ಬಿಡುಗಡೆ ದಿನಾಂಕವನ್ನು ಮುಂದೂಡಿ ನಿಜ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net