ಶುಲ್ಕ ಸಂಗ್ರಹಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ; ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ ಮೊರೆ ಹೋದ ಪಾಲಕರು

madras highcourt
Published on

ಚೆನ್ನೈ: ಖಾಸಗಿ ಶಾಲೆಗಳಿಗೆ ಮಕ್ಕಳ ಪ್ರವೇಶ ಶುಲ್ಕ ಸಂಗ್ರಹಿಸಲು ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪಾಲಕರು ಹೈಕೋರ್ಟ್​ ಮೊರೆ ಹೋಗಿದ್ದಾರೆ.

ಸರ್ಕಾರೇತರ ಶಾಲಾ - ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಆಗಸ್ಟ್​, ಡಿಸೆಂಬರ್​ ಹಾಗೂ 2021ರ ಏಪ್ರಿಲ್​ನಲ್ಲಿ ಒಟ್ಟಾರೆ ಮೂರು ಕಂತುಗಳಲ್ಲಿ ಸಂಗ್ರಹಿಸಲು ಅವಕಾಶ ನೀಡಲು ನಿರ್ಧರಿಸಿದೆ ಎಂದು ಸರ್ಕಾರದ ಅಡ್ವೊಕೇಟ್​ ಜನರಲ್​ ಹೈಕೋರ್ಟ್​ಗೆ ತಿಳಿಸಿದ್ದಾರೆ.

ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಎಸ್​ಇ ನಿಯಮಾವಳಿಗಳ ಅನ್ವಯ ಶುಲ್ಕದ ಶೇ.15 ಮೊತ್ತವನ್ನು ಮೀಸಲು ನಿಧಿಯಾಗಿ ಇರಿಸಿಕೊಳ್ಳಬೇಕು. ಜತೆಗೆ, ಒಟ್ಟು ಶುಲ್ಕದ ಕಾಲುಭಾಗವನ್ನಷ್ಟೇ ಸಂಬಳಕ್ಕೆ ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ ಸಂಬಳಕ್ಕೆ ಅಗತ್ಯವಾದ ಮೊತ್ತವನ್ನಷ್ಟೇ ಪಾಲಕರಿಂದ ಶುಲ್ಕವಾಗಿ ಪಡೆಯಬೇಕೆಂದು ಹೈಕೋರ್ಟ್​ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ಪಾಲಕರ ಪರ ವಕೀಲರಾದ ಎಂ. ಪುರುಷೋತ್ತಮನ್ ತಿಳಿಸಿದ್ದಾರೆ.

ಇದಲ್ಲದೇ, ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಅರ್ಜಿಯನ್ನು ತುರ್ತು ವಿಚಾರಣೆಗಾಗಿ ಪರಿಗಣಿಸುವಂತೆ ಅರ್ಜಿದಾರರು ಕೋರಿದರು.

ಶುಲ್ಕ ಸಂಗ್ರಹ ವಿಚಾರದಲ್ಲಿ ಸರ್ಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರಿಂದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತ್ತು. ಅದರ ಜತೆಯಲ್ಲಿಯೇ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೈಕೋರ್ಟ್​ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net