

Papaya Leaf: ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಪಪ್ಪಾಯ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದೊಂದು ಹಣ್ಣಿನ ಸೇವನೆ ದೇಹದ ಹಲವು ರೋಗಗಳನ್ನು ತಪ್ಪಿಸುವುದಲ್ಲದೇ, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪೂರೈಸುತ್ತದೆ. ಅಚ್ಚರಿ ಸಂಗತಿ ಏನೆಂದರೆ, ಕೇವಲ ಹಣ್ಣಿನಲ್ಲಿ ಮಾತ್ರವಲ್ಲ, ಪಪ್ಪಾಯ ಎಲೆಯಲ್ಲಿ ಕೂಡ ಹತ್ತು ಹಲವು ಆರೋಗ್ಯಕಾರಿ ಅಂಶಗಳಿವೆ. ಇದೊಂದು ರೀತಿ ಚಮತ್ಕಾರಿ ಆಗಿ ಕೆಲಸ ಮಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಈಗ ಮಳೆಗಾಲ. ಹಲವು ರೀತಿಯ ರೋಗಗಳು, ಬ್ಯಾಕ್ಟೀರಿಯಾದ ಸೋಂಕುಗಳು, ಜ್ವರ, ಡೆಂಗ್ಯೂ, ಮಲೇರಿಯಾ ಇತ್ಯಾದಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುವ ಸಮಯ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಆದ್ದರಿಂದ, ದೈನಂದಿನ ಆಹಾರದ ಬಗ್ಗೆ ಹಲವು ಮುನ್ನೆಚ್ಚರಿಕೆಗಳು ವಹಿಸುವುದು ಅತ್ಯಗತ್ಯ. ಪಪ್ಪಾಯಿ ಎಲೆ ರಸವು ಅವುಗಳಲ್ಲಿ ಪ್ರಮುಖವಾದುದು. ಇದು ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಔಷಧೀಯ ಸಸ್ಯ ಎಂದೇ ಕರೆಸಿಕೊಂಡಿದೆ.
ವಿಶೇಷವಾಗಿ ಮಳೆಗಾಲದಲ್ಲಿ ಪಪ್ಪಾಯ ಎಲೆಯ ರಸವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಅಷ್ಟಕ್ಕೂ ಆ ಪ್ರಯೋಜನಗಳು ಯಾವುವು? ಯಾವೆಲ್ಲ ಕಾಯಿಲೆಗೆ ಇದು ರಾಮಬಾಣ ಎಂಬುದರ ಮಾಹಿತಿ ಈ ಕೆಳಕಂಡಂತಿದೆ.
ಪಪ್ಪಾಯಿ ಎಲೆ ರಸವು ಡೆಂಗ್ಯೂಗೆ ಅದ್ಭುತ ಮನೆಮದ್ದು. ಸಾಮಾನ್ಯವಾಗಿ, ಡೆಂಗ್ಯೂ ಜ್ವರವು ರಕ್ತ ಕಣಗಳಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಹೀಗಾಗಿ, ಪಪ್ಪಾಯಿ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಜ್ವರ, ದೌರ್ಬಲ್ಯ ಮತ್ತು ದೇಹದ ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡೆಂಗ್ಯೂಯಿಂದ ಬಳಲುತ್ತಿರುವವರು ಪ್ರತಿದಿನ 2 ಚಮಚ ರಸವನ್ನು ಸೇವಿಸಿದರೆ ಈ ಕಾಯಿಲೆಯಿಂದ ಶೀಘ್ರ ಪರಿಹಾರ ಪಡೆಯಬಹುದು.
ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ, ಆಹಾರವು ಬೇಗನೆ ಕಡುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪಪ್ಪಾಯಿ ಎಲೆ ರಸವು ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಸುಧಾರಿಸುತ್ತದೆ. ವಾಂತಿ ಮತ್ತು ನೋವನ್ನು ನಿವಾರಿಸುತ್ತದೆ. ಇದು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಕಾರಿ. ಇದಲ್ಲದೆ, ಪಪ್ಪಾಯಿ ರಸವು ಯಕೃತ್ತಿನ ಕಾರ್ಯವನ್ನು ಸಹ ಸುಧಾರಿಸುತ್ತದೆ.
ಪಪ್ಪಾಯಿ ಎಲೆಗಳು ವಿಟಮಿನ್ ಎ,ಸಿ,ಇ,ಕೆ, ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದೇಹಕ್ಕೆ ಸೋಂಕು ಮತ್ತು ಬ್ಯಾಕ್ಟೀರಿಯಾದಿಂದ ತಡೆದುಕೊಳ್ಳುವ ಶಕ್ತಿಯನ್ನು ನೀಡುತ್ತವೆ. ಆದ್ದರಿಂದ, ಪ್ರತಿದಿನ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು.
ಮಳೆಗಾಲದಲ್ಲಿ, ಕಲುಷಿತ ನೀರು ಮತ್ತು ತೇವಾಂಶವು ಚರ್ಮದ ಸಮಸ್ಯೆಗಳು ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಪಪ್ಪಾಯಿ ಎಲೆಗಳ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಲಕ್ಷಣಗಳು ಚರ್ಮದ ಸೋಂಕುಗಳನ್ನು ನಿವಾರಿಸುತ್ತದೆ. ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಪಪ್ಪಾಯಿ ಎಲೆಗಳಲ್ಲಿರುವ ವಿವಿಧ ಉತ್ಕರ್ಷಣ ನಿರೋಧಕಗಳು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವಿಷವನ್ನು ಹೊರಹಾಕುತ್ತದೆ. ರಸ ಸೇವನೆಯಿಂದ ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯವನ್ನು ಸಹ ಸುಧಾರಿಸುತ್ತದೆ,(ಏಜೆನ್ಸೀಸ್).