

ಬೆಂಗಳೂರು: ವರ್ಷದ ಮೊದಲಾರ್ಧದಲ್ಲಿ ಅಷ್ಟಾಗಿ ಸದ್ದು ಮಾಡದ ಕನ್ನಡ ಚಿತ್ರರಂಗದ ಸಿನಿಮಾಗಳು, ಬಾಕ್ಸ್ ಆಫೀಸ್ನಲ್ಲಿಯೂ ಕಮಾಲ್ ಮಾಡಲಿಲ್ಲ. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಉತ್ತಮ ಗಳಿಕೆ ಕಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರೆ, ಸ್ಯಾಂಡಲ್ವುಡ್ನಿಂದ ಯಾವುದೇ ಬ್ಲಾಕ್ಬಸ್ಟರ್ಗಳು ಹೊರಹೊಮ್ಮಿರಲಿಲ್ಲ. ಇದು ಚಿತ್ರರಂಗವನ್ನು ತೀರ ಚಿಂತೆಗೆ ದೂಡಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಇದಕ್ಕೆಲ್ಲ ಕಡೆಗೂ ಪುಲ್ಸ್ಟಾಪ್ ಬಿದ್ದಿದೆ.
ಮತ್ತೊಂದು ಕ್ವಾಲಿಟಿ ಕಂಟೆಂಟ್ ಮೂಲಕ ಕನ್ನಡ ಸಿನಿರಸಿಕರ ಎದುರಿಗೆ ಹಾಜರಾಗಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ಬಿ.ಶೆಟ್ಟಿ, 'ಸು ಫ್ರಮ್ ಸೋ' ಎಂಬ ಹಾಸ್ಯ ಕಥಾಹಂದರ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ. ಬರಹಗಾರ, ನಿರ್ದೇಶಕ ಜೆ.ಪಿ. ತುಮಿನಾಡ್ ಬರೆದು, ನಿರ್ದೇಶಿಸಿರುವ ಈ ಚಿತ್ರವು ಚಿತ್ರಮಂದಿರಕ್ಕೆ ಬಂದ ಸಿನಿಪ್ರೇಕ್ಷಕರನ್ನು ನಗಿಸಿ, ಅವರ ಹೊಟೆಯನ್ನು ಹುಣ್ಣಾಗಿಸಿದೆ ಕಳಿಸುವುದಿಲ್ಲ ಎಂಬುದನ್ನು ವಿಮರ್ಶೆ ಮತ್ತು ವ್ಯಾಪಕ ಪ್ರಶಂಸೆಗಳೇ ಖಚಿತಪಡಿಸಿವೆ. ಈಗಾಗಲೇ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.
ವರ್ಷದ ದ್ವಿತೀಯಾರ್ಧದ ಮೊದಲ ತಿಂಗಳು ಜುಲೈನಲ್ಲಿ ಹಲವಾರು ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿವೆ. 'ಜೂನಿಯರ್', 'ಎಕ್ಕ' ಮತ್ತು 'ಸು ಫ್ರಮ್ ಸೋ' ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಹಾಗೂ ಉತ್ತಮ ವಿಮರ್ಶೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಈ ಪೈಕಿ 'ಸು ಫ್ರಮ್ ಸೋ' ಅಲ್ಪಾವಧಿಯಲ್ಲಿ ಭಾರೀ ಮೆಚ್ಚುಗೆಯನ್ನು ಗಳಿಸಿದೆ. ರಾಜ್ ಬಿ. ಶೆಟ್ಟಿ ನಿರ್ಮಾಣದ ಗ್ರಾಮಿಣ ಸೊಗಡಿನ ಈ ಸಿನಿಮಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಗೆದ್ದಿದೆ. ಇದು ಚಿತ್ರತಂಡಕ್ಕೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
ಆರಂಭದಲ್ಲಿ ಕಡಿಮೆ ಚಿತ್ರಮಂದಿರ ಕೊಟ್ಟರೂ ಕಮಾಲ್ ಮಾಡುವಲ್ಲಿ ಮಾತ್ರ ಹಿಂದುಳಿಯಲಿಲ್ಲ. ಕಳೆದ ಕೆಲವು ದಿನಗಳಿಂದ ‘ಸು ಫ್ರಮ್ ಸೋ’ಗೆ ಪ್ರೇಕ್ಷಕರ ಸಂಖ್ಯೆ ಭಾರೀ ಹೆಚ್ಚಾಗಿದೆ. ಇದಕ್ಕೆ ಚಿತ್ರತಂಡ ನೀಡಿರುವ ಭರಪೂರ ಮನರಂಜನೆಯೇ ಸಾಕ್ಷಿ. ಇದೀಗ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಪ್ರಿಯರಿಂದ ನಿರೀಕ್ಷೆಗಿಂತ ಟಿಕೆಟ್ ಬುಕ್ಕಿಂಗ್ಗಳು ಆಗುತ್ತಿದ್ದು, ಹಲವು ಥಿಯೇಟರ್ಗಳು ಹೌಸ್ ಫುಲ್ ಬೋರ್ಡ್ ಇಡುತ್ತಿವೆ. ಇದು ಚಿತ್ರತಂಡಕ್ಕೆ ಗೆಲುವಿನ ಜತೆಗೆ ಲಾಭ ತಂದುಕೊಟ್ಟರೆ, ಸ್ಯಾಂಡಲ್ವುಡ್ಗೆ ಮತ್ತಷ್ಟು ಪುಷ್ಠಿ ನೀಡಿದೆ.