

Tim David: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಡೇವಿಡ್ ಬ್ಯಾಟಿಂಗ್ ಬಲದಿಂದ ಕೆರಿಬಿಯನ್ನರ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ನಾಯಕ ಶೈ ಹೋಪ್ ಸ್ಫೋಟಕ ಶತಕ 102(57), ಇನ್ನೋರ್ವ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ 62 (36) ಅರ್ಧಶತಕದ ಸಹಾಯದಿಂದ 214 ರನ್‌ಗಳ ಗುರಿ ನೀಡಿತು.
215 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 87ಕ್ಕೆ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಆರ್ಸಿಬಿ ಆಟಗಾರ ಟಿಮ್ ಡೇವಿಡ್ 37 ಎಸತಕ್ಕೆ 102 ರನ್, ಆಲ್ರೌಂಡರ್ ಮಿಚೆಲ್ ಓವನ್ 36 (16) ಜೊತೆಗೂಡಿ ವೆಸ್ಟ್ ಇಂಡೀಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ 11 ಭರ್ಜರಿ ಸಿಕ್ಸರ್ಗಳನ್ನು ಒಳಗೊಂಡಿತ್ತು. ಆಸಿಸ್ ಈ ಮೂಲಕ 215 ರನ್‌ಗಳ ಗುರಿಯನ್ನು ಇನ್ನೂ 23 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಡೇವಿಡ್ ಕೇವಲ 37 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಜೋಶ್ ಇಂಗ್ಲಿಸ್ (43 ಎಸೆತಗಳು) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಟಿಮ್ ಡೇವಿಡ್, "ನಾನು ಒಂದು ವರ್ಷದಿಂದ ರಸೆಲ್ ಅವರ ಬ್ಯಾಟ್ ತೆಗೆದುಕೊಂಡು ತಿರುಗಾಡುತ್ತಿದ್ದೆ. ಆದರೆ, ಅದನ್ನು ಬಳಸಲು ಇಂದು ಸೂಕ್ತ ಸಮಯ ಎಂದು ಭಾವಿಸಿದೆ. ಅನೇಕ ದಿನಗಳಿಂದ ನಾನು ಪವರ್ ಹಿಟ್ಟಿಂಗ್ ಕುರಿತು ಸಾಕಷ್ಟು ಪರಿಶ್ರಮ ಪಟ್ಟಿದ್ದು ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಆಡಿರುವ ಅನುಭವದಿಂದ ಇಂತಹ ಇನ್ನಿಂಗ್ಸ್ ಮೂಡಿಬರಲು ಸಾಧ್ಯವಾಯಿತು ಎಂದರು.(ಏಜೆನ್ಸೀಸ್)