ಇಂಗ್ಲೆಂಡ್ ಡ್ರಾ ಮಾಡಿಕೊಳ್ಳಲು ಆಟವಾಡ್ತಿಲ್ಲ: ಆಸ್ಟ್ರೇಲಿಯಾ ಮಾಜಿ​ ನಾಯಕ | IND vs ENG

Steve smith
Published on

IND vs ENG: ಪ್ರಸ್ತುತ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯಲ್ಲಿ ಅತಿಥೇಯ ಇಂಗ್ಲೆಂಡ್ ಕೇವಲ ಮನರಂಜನೆಗೆ ಸೀಮಿತವಾಗದೇ ಗೆಲ್ಲಲು ಎದುರುನೋಡುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಮಿತ್, ಇತ್ತೀಚೆಗೆ ಅತಿ ಹೆಚ್ಚು ಚರ್ಚೆಯಲ್ಲಿರುವ ಬಾಜ್‌ಬಾಲ್ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಇಂಗ್ಲೆಂಡ್​, ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚು ಶ್ರಮಿಸುತ್ತಿದೆ. ಬ್ರೆಂಡನ್ ಮೆಕಲಮ್ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಆಕ್ರಮಣಕಾರಿ ಆಟದ ಶೈಲಿಗೆ ಒಗ್ಗಿಕೊಂಡಿದ್ದು, ವಿಶ್ವ ಕ್ರಿಕೆಟ್‌ನಲ್ಲಿ ಬಾಜ್‌ಬಾಲ್ ಅತಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ತವರಿನ ಸರಣಿಗಳಲ್ಲಿ ಇಂಗ್ಲೆಂಡ್​ನ ಅದೃಷ್ಟವೇ ಬದಲಾಗಿದೆ ಎಂದರು.

ತಂಡವು ತವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಪಖಂಡದಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಸಂದರ್ಭದಲ್ಲಿ ಬಾಜ್‌ಬಾಲ್ ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಹತ್ತು ವರ್ಷಗಳಿಂದ ಇಂಗ್ಲೆಂಡ್ ಆ್ಯಶಸ್​ ಸರಣಿ ಗೆದ್ದಿಲ್ಲ. ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಂಗ್ಲರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಸರಣಿ ಗೆದ್ದರೆ, ಮುಂಬರುವ ಆ್ಯಶಸ್ ಸರಣಿಗೆ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net