ಹೇರಾ ಫೇರಿ-3 ಚಿತ್ರದಿಂದ ಹೊರಬಂದ ಪರೇಶ್ ರಾವಲ್:​​ ಬಾಬುರಾವ್​​ ಪಾತ್ರಕ್ಕೆ ಪಂಕಜ್​ ತ್ರಿಪಾಠಿ ಬೆಸ್ಟ್​ ಅಂದ್ರು ಫ್ಯಾನ್ಸ್​! Hera Pheri 3

Hera Pheri 3
Published on

Hera Pheri 3 : 'ಹೇರಾ ಫೇರಿ' ಜನರ ಮೆಚ್ಚುಗೆ ಗಳಿಸಿರುವ ಪ್ರಸಿದ್ಧ ಹಾಸ್ಯ ಸಿನಿಮಾ. ಎರಡು ಭಾಗ ಯಶಸ್ವಿಯಾಗಿದ್ದು, ಮೂರನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆಯೇ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ. 'ಹೇರಾ ಫೇರಿ 3' ನಿಂದ ಪರೇಶ್ ರಾವಲ್ ಹಠಾತ್ ನಿರ್ಗಮನದ ಬಳಿಕ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಅವರ ಪಾತ್ರವನ್ನು ಮತ್ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಮುಂದೇನು ಅಂತಾ ಯೋಚನೆ ಮಾಡುತ್ತಿರುವಾಗಲೇ ಪಂಕಜ್ ತ್ರಿಪಾಠಿ ಹೆಸರು ಮುನ್ನೆಲೆಗೆ ಬಂದಿದೆ. ಪರೇಶ್ ರಾವಲ್ ಅವರನ್ನು ಪ್ರಸಿದ್ಧಗೊಳಿಸಿದ ಬಾಬುರಾವ್ ಗಣಪತ್ರಾವ್ ಆಪ್ಟೆ ಪಾತ್ರಕ್ಕೆ ಪಂಕಜ್​ ಅವರನ್ನು ಕಲ್ಪಿಸಿಕೊಳ್ಳಲು ಅಭಿಮಾನಿಗಳು ಪ್ರಾರಂಭಿಸಿದ್ದಾರೆ.

ಬಾಬು ಭೈಯಾ ಎಂದೂ ಕರೆಯಲ್ಪಡುವ ಬಾಬುರಾವ್ ಪಾತ್ರದಲ್ಲಿ ಪರೇಶ್ ರಾವಲ್ ನಟನೆ ಎಲ್ಲರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಪರೇಶ್​ ಅವರ ಹಾಸ್ಯಪ್ರಜ್ಞೆ, ಕಾಮಿಡಿ ಟೈಮಿಂಗ್​ ಮತ್ತು ವಿಲಕ್ಷಣ ವ್ಯಕ್ತಿತ್ವವು 'ಹೇರಾ ಫೇರಿ' ಚಿತ್ರದ ಹೃದಯ ಭಾಗವಾಗಿತ್ತು. ಆದರೆ, ಇದೀಗ ಮೂರನೇ ಭಾಗದ ಚಿತ್ರದಿಂದ ಹೊರನಡೆದಿದ್ದಾರೆ. ಈ ಮಧ್ಯೆ, ಬಾಬುರಾವ್ ಆಪ್ಟೆ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಅವರನ್ನು ಕಲ್ಪಿಸಿಕೊಂಡು ರಚಿಸಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಫೋಟೋದಲ್ಲಿ, ತ್ರಿಪಾಠಿ ಅವರು ಬಾಬುರಾವ್ ಅವರ ವಿಶಿಷ್ಟವಾದ ಬಿಳಿ ಧೋತಿ ಮತ್ತು ವೆಸ್ಟ್ ಜೊತೆಗೆ ದಪ್ಪ ಕನ್ನಡಕ, ಚಿನ್ನದ ಸರ ಮತ್ತು ಬಳೆ ಧರಿಸಿರುವುದನ್ನು ಕಾಣಬಹುದು. ಪಂಕಜ್ ತ್ರಿಪಾಠಿ ಅವರು ಹೆರಾ ಫೆರಿಯಲ್ಲಿ ಬಾಬುರಾವ್ ಗಣಪತ್ರರಾವ್ ಆಪ್ಟೆ ಪಾತ್ರವನ್ನು ನಿರ್ವಹಿಸಬಹುದೇ? ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು, ಕಾಮೆಂಟ್​ಗಳ ಬಿರುಗಾಳಿಯನ್ನು ಎಬ್ಬಿಸಿದೆ.

ವೈರಲ್​ ಫೋಟೋಗೆ ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, ಪಂಕಜ್ ತ್ರಿಪಾಠಿ ಅವರು ಬಾಬುರಾವ್​ ಪಾತ್ರಕ್ಕೆ ಅಮೂಲ್ಯವಾದದ್ದನ್ನು ತರಬಹುದು ಆದರೆ, ಅವರೆಂದು ಪರೇಶ್​ ರಾವಲ್​ ಅವರಿಗೆ ಬದಲಿಯಾಗಿರುವುದಿಲ್ಲ. ಅವರು ಒಂದು ಮರು ಆವಿಷ್ಕಾರವಾಗಿರುತ್ತಾರೆ. ಬಹುಶಃ ಪಂಕಜ್​ ಅವರು ಸ್ಪಿನ್-ಆಫ್ ಅಥವಾ ರೀಬೂಟ್‌ನಲ್ಲಿ ಉತ್ತಮ 'ಬಾಬು ಭೈಯಾ' ಮಾದರಿಯ ಪಾತ್ರವನ್ನು ಮಾಡಬಹುದು. ಆದರೆ, ಪರೇಶ್ ರಾವಲ್ ಅವರ ಸ್ಥಾನದಲ್ಲಿ ನೇರವಾಗಿ ಹೆಜ್ಜೆ ಹಾಕಿದರೆ ನಮಗೂ ಬೇಸರವಾಗುತ್ತದೆ ಎಂದಿದ್ದಾರೆ.

ಪಂಕಜ್ ತ್ರಿಪಾಠಿಯನ್ನು ಆ ಪಾತ್ರಕ್ಕೆ ತೆಗೆದುಕೊಂಡರೆ ಮತ್ತು ಪರೇಶ್ ರಾವಲ್ ಅದನ್ನು ಒಪ್ಪದಿದ್ದರೆ, ಬಹುಶಃ ಚಿತ್ರತಂಡ ಹೊಸ ಹೆಸರು, ಪಾತ್ರ ಬದಲಾವಣೆ ಅಥವಾ ಏನಾದರೂ ಮೂಲಕ ಚಿತ್ರಕ್ಕೆ ಹೊಸ ಆಯಾಮವನ್ನು ನೀಡಬೇಕಾಗಬಹುದು. ಪಂಕಜ್ ತ್ರಿಪಾಠಿ ಒಬ್ಬ ಒಳ್ಳೆಯ ನಟ ಮತ್ತು ಅವರು ಖಂಡಿತವಾಗಿಯೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾತ್ರವನ್ನು ಮರುಶೋಧಿಸಬಹುದು. ದುರದೃಷ್ಟವಶಾತ್, ಅವರು ಪರೇಶ್ ಪಾತ್ರವನ್ನು ನಿಖರವಾಗಿ ನಕಲಿಸಲು ಸಾಧ್ಯವಿಲ್ಲ ಎಂದು ಫ್ರಾಂಚೈಸಿಯ ನಿಷ್ಠಾವಂತ ಅಭಿಮಾನಿಯೊಬ್ಬರು ಪತ್ರ ಬರೆದಿದ್ದಾರೆ.

ಕೆಲ ನೆಟ್ಟಿಗರು ಪರೇಶ್ ರಾವಲ್ ನಂತರ ಮುಂದಿನ ಅತ್ಯುತ್ತಮ ಆಯ್ಕೆ ಪಂಕಜ್​ ತ್ರಿಪಾಠಿ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಪಂಕಜ್ ತ್ರಿಪಾಠಿ ಅವರು ಈ ಹಿಂದಿನ ಸಂದರ್ಶನದಲ್ಲಿ ಆಡಿದ್ದ ಮಾತುಗಳು ವೈರಲ್​ ಆಗಿವೆ.

ಕೆಲವು ದಿನಗಳ ಹಿಂದೆ ಬಾಲಿವುಡ್ ಹಂಗಾಮಕ್ಕೆ ಪಂಕಜ್​ ತ್ರಿಪಾಠಿ ಸಂದರ್ಶನ ನೀಡಿದ್ದರು. ಬಾಬುರಾವ್​ ಪಾತ್ರಕ್ಕೆ ನಿಮ್ಮನ್ನು ಸೂಚಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಂಕಜ್​, ನಾನು ಕೇಳಿದ್ದೇನೆ ಮತ್ತು ಓದಿದ್ದೇನೆ. ಆದರೆ, ನಾನು ಅದರಲ್ಲಿ ನಂಬಿಕೆ ಇಡುವುದಿಲ್ಲ. ಪರೇಶ್ ಜಿ ಅದ್ಭುತ ನಟ. ಅವರ ಮುಂದೆ ನಾನು ಶೂನ್ಯ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ನಾನು ಆ ಪಾತ್ರಕ್ಕೆ ಸರಿಯಾದ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ ಎಂದು ತ್ರಿಪಾಠಿ ವಿನಮ್ರವಾಗಿ ಉತ್ತರಿಸಿದರು.

ಹೇರಾ ಫೇರಿ ಮೂಲಕ ತ್ರಿಮೂರ್ತಿಗಳಾದ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಪರದೆಯ ಮೇಲೆ ಮಾಂತ್ರಿಕ ಪ್ರದರ್ಶನ ನೀಡಿದರು. ಹೀಗಾಗಿ ಅಭಿಮಾನಿಗಳು ಅವರ ಮರಳುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಪರೇಶ್ ರಾವಲ್ ಹಿಂದೆ ಸರಿದು ಯಾವುದೇ ಅಧಿಕೃತ ಬದಲಿ ವ್ಯಕ್ತಿಯನ್ನು ದೃಢಪಡಿಸದ ಕಾರಣ, 'ಹೇರಾ ಫೆರಿ 3' ಭವಿಷ್ಯವು ಅನಿಶ್ಚಿತವಾಗಿದೆ. ಮೂಲ ತಂಡವನ್ನು ಮರಳಿ ತರಲು ತಯಾರಕರು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆಯೇ? ಅಥವಾ ಬಾಬುರಾವ್ ಪಾತ್ರವನ್ನು ಹೊಸ ಮುಖದೊಂದಿಗೆ ಚಿತ್ರ ಮುಂದುವರಿಯುತ್ತದೆಯೇ? ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net