

ಇತ್ತೀಚಿನ ದಿನಗಳಲ್ಲಿ ಮಕ್ಕಳ ಚಿತ್ರಗಳ ನಿರ್ಮಾಣ ಬಹಳ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ 'ಪಂಚಮ' ಎಂಬ ಮಕ್ಕಳ ಚಿತ್ರ ನಿರ್ಮಾಣವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಪವಿತ್ರ ಪರ್ಸ್ಯೂಟ್ ಪಿಕ್ಚರ್ಸ್ ಲಾಂಛನದಲ್ಲಿ ಪವಿತ್ರ ಎಂ ಪಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಕ್ರಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೂಲತಃ ರಂಗಶಿಕ್ಷಕರಾಗಿರುವ ಶ್ರೀಧರ್ ನಾಯ್ಕ ಈ ಚಿತ್ರದ ನಿರ್ದೇಶಕರು. ಎ.ಎಸ್.ಮೂರ್ತಿ ಅವರ ಅಭಿನಯ ತರಂಗದಲ್ಲಿ ತರಭೇತಿ ಪಡೆದಿರುವ ಶ್ರೀಧರ್, ಸಾಕಷ್ಟು ಮಕ್ಕಳ ನಾಟಕ ಹಾಗೂ ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನವಷ್ಟೇ ಅಲ್ಲದೆ ಅನೇಕ ನಾಟಕ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಕಾರ್ಟೂನ್ ಧಾರಾವಾಹಿಗಳಿಗೆ ಕಂಠದಾನ ಮಾಡಿದ್ದಾರೆ ಶ್ರೀಧರ್ ನಾಯ್ಕ.
ಮಕ್ಕಳ ಮುಗ್ಧ ಮನಸ್ಸುಗಳಲ್ಲಿ ಕನಸುಗಳನ್ನು ಚಿಗುರಿಸಿ, ಅವರ ಕಲ್ಪನೆಗಳಿಗೆ ಗರಿ ಮೂಡಿಸಿ, ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡಿಸುವ ಜವಾಬ್ದಾರಿ ಯಾರದ್ದು? ಎನ್ನುವುದೇ ಈ ಚಿತ್ರದ ಕಥಾ ಸಾರಾಂಶ. ಶ್ರೀಧರ್ ನಾಯ್ಕ, ಶೃತಿ ನಾಯಕ, ವೀಣಾ ಬಾಲಾಜಿ, ರೋಹಿಣಿ, ಜಗದೀಶ ಮುಂತಾದವರು ಈ ಚಿತ್ರದಲ್ಲಿದ್ದಾರೆ.
ವಿಜಯ ಆದಿತ್ಯ ಸಂಗೀತ, ರೋಷನ್ ಜಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಆಕಾಶ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಪಂಚಮ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಯಾಗಿ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.